ಬೇಲೂರು : ತಾಲೂಕಿನಾದ್ಯಂತ ಮಳೆ ಬಿಡುವಿಲ್ಲದೆ ಬರುತ್ತಿದ್ದು ಅದರಲ್ಲೂ ಮಲೆನಾಡು ಪ್ರದೇಶವಾದ ಅರೆಹಳ್ಳಿ ಮತ್ತು ಬಿಕ್ಕೋಡು ಹೋಬಳಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಬರುತ್ತಿದೆ.
ಪರಿಣಾಮ ವಾಟೆಹೊಳೆ ಜಲಾಶಯ ಭರ್ತಿಗೆ ಒಂದು ಅಡಿಯಷ್ಟೆ ಬಾಕಿ ಇದ್ದು ಇಂದು ರಾತ್ರಿ ವೇಳೆಗೆ ಜಲಾಶಯದಿಂದ ನೀರು ಹೊರಬಿಡುವ ಸಾಧ್ಯತೆಯಿದೆ.
ಮಳೆಯಿಂದ ಈ ಭಾಗದ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸುಂಡೆಕೆರೆ ಹಾಗೂ ನಾರ್ವೆ ಪೇಟೆ ಸಂಪರ್ಕಿಸುವ ಸೇತುವೆ ಮುಳುಗಡೆ ಯಾಗಿದೆ.
ಮಳೆಗಾಳಿಗೆ ವಿದ್ಯುತ್ ಕಂಬಗಳು ಹಾಗೂ ರಸ್ತೆಬದಿಯ ಮರಗಳು ನೆಲಕಚ್ಚಿದ್ದು ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಕೆರೆ-ಕಟ್ಟೆ ಹಳ್ಳ, ಕೊಳ್ಳ ತುಂಬಿ ಹರಿಯುತ್ತಿದ್ದು ನಾಟಿ ಮಾಡಲು ಸಿದ್ದಪಡಿಸಿದ್ದ ಸಸಿ ಮಡಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಭೀಕರ ಗಾಳಿ-ಮಳೆಗೆ ಸುಲಗಳಲೆ ಗ್ರಾಮದ ಕುಮಾರ್ ಎಂಬವರ ವಾಸದ ಮನೆ ಅರ್ಧಭಾಗ ಬಿದ್ದು ಹೋಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಳಿಯ ಹೊಡೆತಕ್ಕೆ ನಾರ್ವೆ ಪೇಟೆ ಗ್ರಾಮದ ರಾಮಕೃಷ್ಣ ಎಂಬುವರು ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮೇಲ್ಚಾವಣಿ ಪುಡಿಯಾಗಿದೆ. ಇಂಟಿ ತೊಳಲು ಮಂಜೇಗೌಡ ಎಂಬುವವರ ಜಾನುವಾರು ಕೊಟ್ಟಿಗೆಯ ಗೋಡೆ ಕುಸಿದುಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.
ವಾಟೆಹೊಳೆ ಜಲಾಶಯದ ಜಾಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿದ್ದು, ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ನದಿಗೆ ಅಣೆಕಟ್ಟೆಯಿಂದ ಯಾವುದೇ ಸಮಯದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆಯಿದೆ. ಜಲಾಶಯದ ಗರಿಷ್ಠ ಮಟ್ಟ: ೯೬೬.೦೫ ಮೀಟರ್ ಇದ್ದು ಇಂದಿನ ಮಟ್ಟ : ೯೬೫.೧೮ ಮೀಟರ್ ಇದೆ. ಒಳಹರಿವು: ೫೫೯ ಕ್ಯೂಸೆಕ್ಸ್ ಇದೆ ಎಂದು ವಾಟೆಹೊಳೆ ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಂದರರಾಜು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಅಣೆಕಟ್ಟಿಯ ಕೆಳಭಾಗದ ಹಾಗೂ ನದಿ ಪಾತ್ರದ ಪ್ರದೇಶದಲ್ಲಿರುವ ಎಲ್ಲಾ ಹಳ್ಳಿಗಳ ಗ್ರಾಮಸ್ಥರು ಜನ ಜಾನುವಾರುಗಳು ಮತ್ತು ವಸ್ತಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
![]() |
| Advertisement |
![]() |
| Advertisement |


