ಬೇಲೂರು : ಇಲ್ಲಿನ ವೈ ಡಿ.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ರವರ 125ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಮತಿ ಸೌಮ್ಯ ಆನಂದ್ರವರು ನೀವು ನನಗೆ ರಕ್ತಕೊಡಿ, ನಾನು ನಿನಗೆ ಸ್ವಾತಂತ್ರ್ಯ ಕೊಡಿಸುತ್ತೇನೆ, ಸ್ವಾತಂತ್ರ್ಯವೆಂಬುದು ಯಾರು ಕೊಡುವ ಸರಕಲ್ಲ, ಅದು ನಾವು ಪಡೆದುಕೊಳ್ಳುವುದು ಎಂಬ ನೇತಾಜಿ ಸುಭಾಷಚಂದ್ರ ಬೋಸರವರ ಮಾತುಗಳನ್ನು ಸ್ಮರಿಸುತ್ತಾ ಇಂದಿನ ಯುವಜನಾಂಗ ದೇಶಭಕ್ತಿಯನ್ನು ಬೆಳೆಸಿಕೊಂಡು ರಾಷ್ಟ್ರಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ನೇತಾಜಿಯವರ ನಾಯಕತ್ವ, ದೂರದೃಷ್ಟಿ ಹೋರಾಟ ಮನೋಭಾವ ಇಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕರಾದ ಶ್ರೀ ವೀರಭದ್ರಪ್ಪ ಇವರು ನೇತಾಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ತೀವ್ರಗಾಮಿ ಸ್ವರೂಪದ ಹೋರಾಟವನ್ನು ನಡೆಸಿದರು. ಇವರ ಕೊಡುಗೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಜನವರಿ 23 ದಿನವನ್ನು ಪರಾಕ್ರಮ ದಿನವಾಗಿ ಆಚರಿಸುತ್ತಿದ್ದು ವರ್ಷಪೂರ್ತಿ ಶಿಕ್ಷಣ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ನೇತಾಜಿಯವರ ತತ್ವಾದರ್ಶಗಳ ಅರಿವು ಮೂಡಿಸಲು ತಿಳಿಸಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ಬೊಮ್ಮಣ್ಣ, ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಇವರು ನೇತಾಜಿಯವರ ಜೀವನದ ಹಲವಾರು ಘಟನೆಗಳ ಉದಾಹರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ನೇತಾಜಿಯವರ ವ್ಯಕ್ತಿತ್ವದ ಸಮಗ್ರ ಪರಿಚಯ ಮಾಡಿಕೊಟ್ಟರು. ನೇತಾಜಿಯವರು ತಮ್ಮ ಶಾಲಾಶಿಕ್ಷಣದ ಸಂದರ್ಭದಲ್ಲಿಯೇ ತಮ್ಮ ಶಿಕ್ಷಕರಿಂದಾದ ಭಾರತದ ಹೀಯಾಳಿಕೆಯನ್ನು ಉಗ್ರವಾಗಿ ಪ್ರತಿಭಟಿಸಿದ್ದರು. ದೇಶವಿದೇಶಗಳಲ್ಲಿ ಸಂಚರಿಸಿ ಐಎನ್ಎ ಸ್ಥಾಪಿಸಿದ ಸಂಘಟನಾ ಚತುರರಾಗಿದ್ದರು. ಅವರು ಸ್ವತಂತ್ರ ಭಾರತದಲ್ಲಿ ಜೀವಿಸಿದ್ದರೆ ದೇಶದ ಅಭಿವೃದ್ಧಿಯ ಗತಿಯೇ ಇನ್ನೂ ತೀವ್ರಸ್ವರೂಪದಲ್ಲಿ ಬದಲಾಗುತ್ತಿತ್ತು. ದೇಶದ ಭವಿಷ್ಯದ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಇಂದಿಗೂ ಜೀವಂತವಾಗಿವೆ ಎಂದರು.
ಸುಭಾಷಚಂದ್ರ ಬೋಸ್ರವರನ್ನು ಕುರಿತು ಮಾತನಾಡಿದ ವಿದ್ಯಾರ್ಥಿ ಗಿರೀಶ್, ನೇತಾಜಿಯವರು ಭಾರತ ಕಂಡಂತಹ ಅಪ್ರತಿಮ ದೇಶಪ್ರೇಮಿ ಹಾಗು ಧೀಮಂತ ನಾಯಕರಾಗಿದ್ದರು. ಇಂದಿನ ಯುವ ಜನಾಂಗ ಅವರ ಜೀವನದ ಸಮಗ್ರ ಅಧ್ಯಯನ ಕೈಗೊಂಡು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗು ದೇಶದ ಅಭಿವೃದ್ಧಿಗಾಗಿ ತಮ್ಮ ಸಾಮರ್ಥ್ಯ ಮೀರಿ ಶ್ರಮಿಸಬೇಕೆಂದು ಕರೆ ಕೊಟ್ಟರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪುಟ್ಟರಾಜು ರವರು ನೇತಾಜಿಯವರ ಜೀವನವು ನಮಗೆಲ್ಲರಿಗೂ ಆದರ್ಶಪ್ರಾಯವಾಗಿವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ದೇಶದ ಉತ್ತಮ ನಾಗರೀಕರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಅನೂಷಾ, ಪ್ರಾರ್ಥನೆಯನ್ನು ಲತಾ, ಸ್ವಾಗತವನ್ನು ಮಿಲನ ಹಾಗು ವಂದನಾರ್ಪಣೆಯನ್ನು ಜಸ್ಮಿತಾ ಎಂಬ ವಿದ್ಯಾರ್ಥಿಗಳು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶ್ರೀಮತಿ ಜ್ಯೋತಿ ಎಂ. ಆರ್., ಶ್ರೀ ಮೋಹನಕುಮಾರ ಎಚ್. ಆರ್., ಶ್ರೀ ಲೋಕೇಶ್ ಬಿ. ಆರ್. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.