ಹಾಸನ: ಪೆನ್ಷನ್ ಮೊಹಲ್ಲ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು 500 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಎಸ್ ಪಿ ಹರಿರಾಂ ಶಂಕರ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಕೊಲೆಯಾದ ಮಹಿಳೆ ಮಂಜುಳಾ ಅವರ ಚಿಕ್ಕಪ್ಪನ ಮಗ ಸುನಿಲ್ ಕುಮಾರ್ (39) ಪ್ರಮುಖ ಆರೋಪಿಯಾಗಿದ್ದು, ಈತನೊಂದಿಗೆ ಆಂಧ್ರ ಮೂಲದ ಮುರಳಿ (39 ) ಹಾಗೂ ಬೆಂಗಳೂರಿನ ರಾಜು (34) ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಸುನಿಲ್ ಕುಮಾರ್ ಮಂಜುಳಾ ಅವರ ಚಿಕ್ಕಪ್ಪನ ಮಗ ಆದ ಕಾರಣ ಸಿಸಿ ಕ್ಯಾಮೆರಾ ಸೇರಿದಂತೆ ಎರಡು ಗೇಟ್ ಗಳ ಭದ್ರತೆ ಇದ್ದರೂ ಸಹ ಮನೆ ಒಳಗೆ ಪ್ರವೇಶಿಸಲು ಸುಲಭವಾಗಿದೆ, ಸಂಬಂಧಿಕನಾದ ಕಾರಣ ಮಂಜುಳಾ ಅವರು ಆರೋಪಿಗಳಿಗೆ ಕುಡಿಯಲು ಟೀ ನೀಡಿದ್ದು ನಂತರ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಚಿನ್ನ ಭರಣಗಳನ್ನು ದೋಚಿದ್ದಾರೆ ಎಂದು ತಿಳಿಸಿದರು.
ಪ್ರಕರಣ ನಂತರ ಆರೋಪಿಗಳು ಎಂಟು ಗ್ರಾಂ ಚಿನ್ನವನ್ನು ಗಿರವಿಇಟ್ಟು ಹಣ ಪಡೆದಿದ್ದಾರೆ .ಉಳಿಕೆ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದರು .
ಅಂತರ ಜಿಲ್ಲಾ ಖದೀಮರು ಬಂಧನ:೮ ಲಕ್ಷ ಮೌಲ್ಯದ ಮಾಲು ವಶಕ್ಕೆ
ಡಕಾಯಿತಿ -ಬೈಕ್ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರು ಮಂದಿ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿ ೮ ಲಕ್ಷ ಮೌಲ್ಯದ ಚಿನ್ನ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ಈ ಪ್ರಕರಣದ ಆರೋಪಿಗಳಾದ ಹಾಸನ ಮೂಲದ ಸಾದಿಕ್ ಪಾಷಾ (24 ), ಶರತ್ (23 ), ಸೂರ್ಯ (22), ರವಿ( 22 ) ಲಿಖಿತ್ (20) ಎಂಬುವರನ್ನು ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿ ಅಭಿ ತಲೆಮರಿಸಿಕೊಂಡಿದ್ದು ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಆರೋಪಿಗಳು ಹಾಸನ ಅಲ್ಲದೆ ಚಿಕ್ಕಮಗಳೂರು, ಮೈಸೂರು, ಮಂಡ್ಯ ,ಜಿಲ್ಲೆಯಲ್ಲಿಯೂ ಸಹ ಡಕಾಯಿತಿ, ಮನೆ ಕಳ್ಳತನ, ಬೈಕ್ ಕಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ನಂತರ ತಿಳಿದು ಬಂದಿದೆ ಎಂದರು.
ಆರೋಪಿಗಳಿಂದ 2 ಕೆಟಿಎಮ್ ಬೈಕ್ , ಒಂದು ,ಡಿಯೋ ಸ್ಕೂಟರ್, 58 ಗ್ರಾಂ ಚಿನ್ನದ ಆಭರಣ , ಒಂದು ಲ್ಯಾಪ್ಟಾಪ್ , ಒಂದು ಮೊಬೈಲ್ ಸೇರಿದಂತೆ ಸುಮಾರು 8 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಚೆಕ್ ಪೋಸ್ಟ್ ನಿಂದ ಅಪರಾಧ ಪತ್ತೆ:
ಜುಲೈ 19ರಂದು ಚೆಕ್ ಪೋಸ್ಟ್ ನಲ್ಲಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಸಾಧಿಕ್ ಪಾಷ ಹಾಗೂ ಶರತ್ ಬೈಕ್ ನಲ್ಲಿ ಬಂದ ಸಂದರ್ಭದಲ್ಲಿ ತಪಾಸಣೆ ಮಾಡುವ ವೇಳೆ ಓಡಲು ಯತ್ನಿಸಿದರು ಈ ಸಂದರ್ಭದಲ್ಲಿ ಹಿಡಿದು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ ಪಿ ತಿಳಿಸಿದರು.
ಚೆಕ್ ಪೋಸ್ಟ್ ಗಳ ನಿರ್ಮಾಣದಿಂದ ಅಪರಾಧ ಪ್ರಕರಣಗಳು ಪತ್ತೆಯಾಗುತ್ತಿದ್ದು ಪ್ರತಿ ತಾಲೂಕಿನಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿರುವುದು ಇದೇ ಮುಖ್ಯ ಉದ್ದೇಶದಿಂದ ಎಂದು ತಿಳಿಸಿದರು.
ಸಿಸಿ ಕ್ಯಾಮೆರಾ ಅಳವಡಿಕೆಗೆ ಮನವಿ :
ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಸಾಕಷ್ಟು ಅಪರಾಧ ಪ್ರಕರಣಗಳನ್ನು ತಡೆಹಿಡಿಯಬಹುದಾಗಿದ್ದು ಮಾರುಕಟ್ಟೆಯಲ್ಲಿ ಮೂರರಿಂದ ನಾಲ್ಕು ಸಾವಿರಕ್ಕೆ ಸಿಸಿ ಕ್ಯಾಮೆರಾ ಲಭ್ಯವಾಗುತ್ತಿದ್ದು ಪ್ರತಿ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವ ಮೂಲಕ ಅಪರಾಧ ಪ್ರಕರಣ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಎಸ್ಪಿ ಇದೆ ವೇಳೆ ಮನವಿ ಮಾಡಿದರು.ಹಾಗೂ ಚಿನ್ನಾಭರಣಗಳನ್ನು ಮನೆಯಲ್ಲಿ ಇಡದೆ ಬ್ಯಾಂಕಿನ ಲಾಕರ್ ಗಳಲ್ಲಿ ಇಡುವಂತೆ ಹೇಳಿದರು.
ಪ್ರಕರಣ ಪತ್ತೆ ಹಚ್ಚುವಲ್ಲಿ ಎಎಸ್ ಪಿ ತಮ್ಮಯ್ಯ ಡಿವೈಎಸ್ಪಿ ಉದಯ ಭಾಸ್ಕರ್ ಅವರ ಮಾರ್ಗದರ್ಶನ ದಲ್ಲಿ ಸಿಪಿಐ ರೇಣುಕಾ ಪ್ರಸಾದ್, ಪಿಎಸ್ಐ ದಿನೇಶ್ ಕುಮಾರ್, ಲೋಹಿತ್, ಸಿಬ್ಬಂದಿಗಳಾದ ಹರೀಶ್ ,ತುಳಸಿ ಪ್ರಸಾದ್, ಅನುಕುಮಾರ್, ಶಿವಕುಮಾರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೆ ಎಸ್ಪಿ ಅಭಿನಂಧಿಸಿದರು.