ಆರೋಗ್ಯವಂತರೇ ನಿಜವಾದ ಶ್ರೀಮಂತರು: ಸುಜಲಾ ಲೋಕೇಶ್

ಹಾಸನ: ಹೆಚ್ಚಿನ ಹಣ ಇದ್ದವರಿಗಿಂತ ಉತ್ತಮ ಆರೋಗ್ಯ ಹೊಂದಿರುವವರೇ ನಿಜವಾದ ಶ್ರೀಮಂತರು ಎಂದು ಸುಜಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಸ್.ಲೋಕೇಶ್ ತಿಳಿಸಿದರು.
 ನಗರದ ಸರಕಾರಿ ಕಲಾ ಕಾಲೇಜು ಆವರಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸುಜಲಾ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪದವಿ ಪೂರ್ವ ಕಾಲೇಜುಗಳ ಎ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ಹಣ ಇದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಣ ಉಳ್ಳವರಿಗಿಂತ ಉತ್ತಮ ಆರೋಗ್ಯ ಹೊಂದಿರುವವರನ್ನು ಶ್ರೀಮಂತರು ಎನ್ನಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಆದ್ದರಿಂದ ಮಕ್ಕಳು ಚಿಕ್ಕಂದಿನಿAದಲೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪೋಷಕರು ಕೂಡ ತಮ್ಮ ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತಗೊಳಿಸದೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.
ಇತ್ತೀಚೆಗೆ ನಮ್ಮ ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಕ್ರೀಡಾಪಟುಗಳಿಗೆ ಉದ್ಯೋಗದಲ್ಲೂ ಮೀಸಲಾತಿ ನೀಡುವುದಾಗಿ ಸಿಎಂ ಘೋಷಿಸಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. 
 ಜಿಲ್ಲಾ ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಚಕ್ರಪಾಣಿ ಮಾತನಾಡಿ, ಕೋವಿಡ್‌ನಿಂದ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳು ಕ್ರೀಡಾಕೂಟದಿಂದ ವಂಚಿತರಾಗಿದ್ದರು. ಕ್ರೀಡಾಕೂಟ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣದ ಜೊತೆ ಆರ್ಥಿಕವಾಗಿ ಸಬಲರಾಗಬೇಕು ಎಂಬುದನ್ನು ಕಲಿಸುತ್ತದೆ. ದೈಹಿಕ ಶಿಕ್ಷಕರ ಕೊರತೆಯಿಂದ ಕ್ರೀಡೆಗೆ ಹಿನ್ನಡೆಯಾಗುತ್ತಿದೆ. ಆದರೂ ಭಾರತ ಸರ್ಕಾರ ಇತ್ತೀಚೆಗೆ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದರಿಂದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ ಹೆಚ್ಚು ಪದಕ ಗಳಿಸಲು ಸಾದ್ಯವಾಯಿತು ಎಂದು ಹೇಳಿದರು. 
 ಸರಕಾರಿ ಕಲಾ ಕಾಲೇಜು ಪ್ರಾಂಶುಪಾಲ ಟಿ.ಪಿ.ಪುಟ್ಟರಾಜು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಪಠ್ಯದಷ್ಟೇ ಕ್ರೀಡೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮಾನಸಿಕ ದೈಹಿಕ ಆರೋಗ್ಯಕ್ಕೆ ಕ್ರೀಡೆ ಬಹಳ ಸಹಕಾರಿ ಎಂದು ಸಲಹೆ ನೀಡಿದರು.
 ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಗದೀಶ್, ಸುಜಲಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶ್ವೇತಾ ಲೋಕೇಶ್, ಸುಜಲಾ ಪಿಯು ಕಾಲೇಜು ಪ್ರಾಂಶುಪಾಲರಾದ ತನುಜಾ, ಜಿಲ್ಲಾ ದೈಹಿಕ ಶಿಕ್ಷಣ ಸಂಚಾಲಕ ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.

Post a Comment

Previous Post Next Post