ಅವರ ಮನೆಗೆ ಅವರೇ ಬೆಂಕಿ ಹಾಕಿಕೊಂಡಿದ್ದಾರೆ :ಎಚ್ ಡಿ ರೇವಣ್ಣ ವಿರುದ್ಧ ಎಟಿಆರ್ ಆಕ್ರೋಶ

ಅರಕಲಗೂಡು: ಮನೆಯೊಳಗೆ ಇರುವವರೇ ಮನೆ ಹಾಳು ಮಾಡೋದು. ಹೊರಗಿರುವವರು ಹೇಗೆ ಹಾಳು ಮಾಡುತ್ತಾರೆ. ಅವರ ಮನೆಗೆ ಅವರೇ ಬೆಂಕಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅದು ಯಾರನ್ನು ಸುಡುತ್ತದೆ ಅಂತ ಕಾದು ನೋಡಿ ಎಂದು ಶಾಸಕ ಎ.ಟಿ. ರಾಮಸ್ವಾಮಿ ಅವರು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚರ್ಚೆ ಮಾಡಲಿಕ್ಕೆ, ಸತ್ಯ ಹೇಳಲು ಹಿಂದು ಮುಂದು ನೋಡಲ್ಲ. ಸುಳ್ಳು ಹೇಳಲಿಕ್ಕೆ ತುಂಬಾ ಭಯಪಡುತ್ತೇನೆ. ಮುಂದಿನ ದಿನಗಳಲ್ಲಿ ವಿವರವಾಗಿ ಚರ್ಚೆ ಮಾಡುತ್ತೇನೆ. ಎಲ್ಲವನ್ನೂ ಜನರ ತೀರ್ಮಾನಕ್ಕೆ ಬಿಟ್ಟಿದ್ದೀನಿ. ನಾನು ನೆಮ್ಮದಿಯಾಗಿ, ಸಂತೋಷವಾಗಿ, ಖುಷಿಯಾಗಿದ್ದೀನಿ. ಕಾರಣ ನಾನು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ, ಮಾಡೋಲ್ಲ. ಜನರಿಗೋಸ್ಕರ ಮಾಡಿದ್ದೀನಿ, ತೀರ್ಮಾನ ಜನರಿಗೆ ಬಿಡ್ತಿನಿ. ರಾಜಕಾರಣದಲ್ಲಿ ಖಂಡಿತವಾಗಿಯೂ ಮುಂದುವರಿಯುತ್ತೇನೆ ಎಂದರು. 
ಎಲ್ಲಿಯವರೆಗೆ ನನ್ನ ಶಕ್ತಿ ಇರುತ್ತದೆ ಅಲ್ಲಿಯವರೆಗೆ ಅನ್ಯಾಯ, ಅಸತ್ಯ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡೇ ಮಾಡುತ್ತೇನೆ. ನನಗೆ ದೇವೇಗೌಡರು ಹಾಸನ ಜಿಲ್ಲೆಯನ್ನು ಬಿಟ್ಟು ತುಮಕೂರು ಜಿಲ್ಲೆಗೆ ಹೋಗುವುದು ಇಷ್ಟವಿರಲಿಲ್ಲ. ಯಾರನ್ನು ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ಚನ್ನಪಟ್ಟಣದಲ್ಲಿ ಒಂದು ಪೂರ್ವಭಾವಿ ಸಭೆ ನಡೆಯಿತು. ಎಲ್ಲರೂ ಕೂಡ ಪ್ರಜ್ವಲ್ ರೇವಣ್ಣ ಹೆಸರು ಹೇಳಿದ್ದರು. ಆದರೆ ನಾನು ಅವರ ಹೆಸರು ಹೇಳಲಿಲ್ಲ, ನನಗೆ ಆ ಅಭಿಪ್ರಾಯ ಇರಲಿಲ್ಲ. ಅಂತಹ ಹಿರಿಯ ಮುತ್ಸದ್ದಿಯನ್ನ ಜಿಲ್ಲೆಯಿಂದ ಹೊರಗೆ ಕಳುಹಿಸಲು ನನ್ನ ಆತ್ಮ ಒಪ್ಪುತ್ತಿರಲಿಲ್ಲ, ಆತ್ಮ ಸಾಕ್ಷಿಯಂತೆ ಪ್ರಜ್ವಲ್ ಹೆಸರು ಹೇಳಲಿಲ್ಲ. ಅದಕ್ಕೆ ಕೆಲವರಿಗೆ ಕೋಪ ಇರಬಹುದು, ಅದಕ್ಕೆ ನಾನೇನು ಎದೆಗುಂದುವುದಿಲ್ಲ, ಅವರ ಮುಂದೆ ಹೋಗಿ ಯಾವಾಗಲೂ ಸ್ವಾಭಿಮಾನ, ಆತ್ಮಗೌರವವನ್ನು ಕಳೆದುಕೊಂಡು ನಿಂತಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಆತ್ಮಗೌರವವನ್ನು ಕಾಪಾಡಿಕೊಂಡು ಈ ಕ್ಷೇತ್ರದ ಘನತೆ, ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಿಕೊಂಡು ಬಂದಿದ್ದೀನಿ ಎಂದು ಹೇಳಿದರು.
 ಎ.ಮಂಜು ಜೆಡಿಎಸ್ ಸೇರ್ಪಡೆ ಘೋಷಿಸಿದ ವಿಚಾರ ಕುರಿತು ಕಿಡಿಕಾರಿದ ಅವರು, ಪ್ರಜಾಪ್ರಭುತ್ವದಲ್ಲಿ ಅದನ್ನು ಕಿತ್ತುಕೊಳ್ಳಲು ಆಗುತ್ತಾ, ಹಿಡಿಯಲು ಆಗುತ್ತಾ ನನಗೆ, ಇದೊಂತರ ಸ್ವೇಚ್ಛಾಚಾರದ ರಾಜಕಾರಣ ಅಲ್ವಾ? ರೇವಣ್ಣ ಅವರು ನಮ್ಮ ಮನೆಗೆ ಎರಡು ದಿನ ಬಂದಿದ್ದರು. ನಾನು ದೊಡ್ಡವರ ಜೊತೆ ಮಾತನಾಡೋಣ ಅಂತ ಹೇಳಿದ್ದೆ. ಮಾತಾಡಿ ಕೆಲವು ಗೊಂದಲಗಳು, ಸಮಸ್ಯೆಗಳಿವೆ ಅದನ್ನು ಬಗೆಹರಿಸಿಕೊಳ್ಳೋಣ ಅಂತ ಹೇಳ್ದೆ. ಆಯ್ತ ಅಂತ ಹೋದರು, ಜ.22 ರಂದು ದೊಡ್ಡ ಕಾರ್ಯಕ್ರಮ ಇತ್ತು, ಜ.21 ರಂದು ಏನು ಸಂಚು ನಡೀತು. ಯಾವ ರೀತಿ ಕೂಗಿದ್ದರು. ಅವರೆಲ್ಲಾ ಒಳ್ಳೆಯವರು, ನಾನು ಕೆಟ್ಟವನಲ್ಲವಾ? ಕೆಟ್ಟೋನು ಒಳ್ಳೆಯವರ ಸಂಘ ಮಾಡಿ ಅವರ ಸಹವಾಸ ಮಾಡಿ ಅವರನ್ನು ಕೆಡ್ಸೋದು ಏಕೆ ಅಂತ ಹೇಳಿ ದೂರ ಇರಬೇಕಲ್ವಾ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment

Previous Post Next Post