ಹಾಸನ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ್ದ ಆಪರೇಷನ್ ಓಲ್ಡ್ ಮಕ್ನಾ ಸಕ್ಸಸ್ ಆಗಿದ್ದು, ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಸ್ಥಳೀಯರ ನಿದ್ದೆ ಕೆಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಸಮೀಪದ ಒಸ್ಸೂರು ಎಸ್ಟೇಟ್ ಬಳಿ ಕಾಡಾನೆ ಸೆರೆಯಾಗಿದೆ.
ಕಳೆದ ಕೆಳ ದಿನಗಳಿಂದ ಆಹಾರಕ್ಕಾಗಿ ಮನೆಗಳ ಮೇಲೆ ದಾಳಿ ಮಾಡಿ ಪುಂಡಾನೆ ಆತಂಕ ಸೃಷ್ಟಿ ಮಾಡಿತ್ತು. ಸದ್ಯ ಸಕಲೇಶಪುರದ ಮಠಸಾಗರ ಬಳಿಯಲ್ಲಿ ಆನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಅಂದಹಾಗೇ, 2022ರ ಜೂನ್ 29 ರಂದು ಇದೇ ಆನೆಯನ್ನು ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಬಂಡೀಪುರಕ್ಕೆ ಸ್ಥಳಾಂತರ ಮಾಡಿದ್ದರು.
ಆದರೆ ಒಂದೇ ತಿಂಗಳ ಅಂತರದಲ್ಲಿ ನೂರಾರು ಕಿಲೋ ಮೀಟರ್ ಕ್ರಮಿಸಿ ಸಲಗ ಮತ್ತೆ ತನ್ನ ಮೂಲ ಸ್ಥಾನಕ್ಕೆ ವಾಪಸ್ ಆಗಿತ್ತು. ವಾಪಸ್ ಆಗುತ್ತಿದ್ದಂತೆ ರೊಚ್ಚಿಗೆದಿದ್ದ ಕಾಡಾನೆ, ಮನೆಗಳ ಮೇಲೆ ದಾಳಿ ಮಾಡಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು.
ಡಿಸಿಎಫ್ ಹರೀಶ್ ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲಾಗಿದ್ದು, ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಐದು ಸಾಕಾನೆಗಳಿಂದ ಕಾರ್ಯಾಚರಣೆ ನಡೆಸಿ ಯಶಸ್ವಿಗೊಳಿಸಲಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ತಜ್ಞರು ಅರವಳಿಕೆ ಮದ್ದು ನೀಡಿದ ಬಳಿಕವೂ ಸುಮಾರು ಒಂದೂವರೆ ಗಂಟೆ ಕಾಲ ನಿಲ್ಲದೆ ಅಧಿಕಾರಿಗಳನ್ನು ಸತಾಯಿಸಿತ್ತು ಮಕ್ನಾ ಆನೆ (ದಂತವಿಲ್ಲದ ಗಂಡು ಆನೆ). ಸಾಕಾನೆಗಳ ಜೊತೆ ಹತ್ತಾರು ಕಿಲೋಮೀಟರ್ ಸುತ್ತಾಡಿ ಕಡೆಗೂ ಪುಂಡಾನೆ ಸೆರೆ ಹಿಡಿಯಲಾಗಿದ್ದು, ಕಾಡಾನೆ ಸೆರೆಯಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Tags
ಸಕಲೇಶಪುರ