ಹಾಸನ: ಆಲೂಗಡ್ಡೆ ಬೀಜಗಳ ಮಾರಾಟ ಪ್ರಕ್ರಿಯೆ ಆರಂಭ

ಹಾಸನ: ಜಿಲ್ಲೆಯಾದ್ಯಂತ ಹಲವೆಡೆ ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರು ಬೇಸಾಯ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು, ಆಲೂಗಡ್ಡೆ ಬಿತ್ತನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ಮುಂಗಾರಿನ ಬಿತ್ತನೆ ಮಾಡಲು ಆಲೂಗಡ್ಡೆ ಬೀಜಗಳ ಮಾರಾಟ ಪ್ರಕ್ರಿಯೆ ಪ್ರಾರಂಭವಾಗಿದ್ದು, ರೈತರು ಎಪಿಎಂಸಿ ಹಾಗೂ ಶೈತ್ಯಾಗಾರಗಳಿಂದ ಆಲೂಗಡ್ಡೆಯನ್ನು ಖರೀದಿಸುತ್ತಿದ್ದಾರೆ. ₹1,500 ರಿಂದ ₹1,600 ರವರೆಗೆ ಈಗಾಗಲೇ ದರ ನಿಗದಿ ಪಡಿಸಲಾಗಿದೆ.


ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಉತ್ತಮ ದರ್ಜೆಯ ಬೀಜಗಳನ್ನು ಮಾರಾಟ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದಾಗ್ಯೂ ಬಿತ್ತನೆ ಮಾಡುವ ಮೊದಲು ರೈತರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಭುರಾಜ್‌ ತಿಳಿಸಿದ್ದಾರೆ.

ಈಗಾಗಲೆ ಬಿತ್ತನೆಗಾಗಿ ಆಲೂಗಡ್ಡೆಗಳನ್ನು ಖರೀದಿಸಿರುವ ರೈತರು, ಗಡ್ಡೆಗಳನ್ನು ತಕ್ಷಣ ಬಿತ್ತನೆ ಮಾಡಿದರೆ, ಮೊಳಕೆ ಒಡೆಯುವುದಿಲ್ಲ. ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಗಡ್ಡೆಗಳು ಕೊಳೆಯುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗಡ್ಡೆಗಳನ್ನು ಖರೀದಿಸಿದ ನಂತರ ಕನಿಷ್ಠ 10-15 ದಿನಗಳವರೆಗಾದರೂ ನೆರಳಿನಲ್ಲಿ, ಗಾಳಿ ಆಡುವಂತಹ ಸ್ಥಳದಲ್ಲಿ ಹರಡಿ ಹದಗೊಳಿಸಬೇಕು.

ಹದಗೊಳಿಸಲು ಹರಡಿರುವ ಗಡ್ಡೆಗಳ ಮೇಲೆ ಬ್ಯಾವಿಸ್ಟಿನ್ ಶಿಲೀಂಧ್ರ ನಾಶಕ ಪುಡಿಯನ್ನು ಎರಚಬೇಕು. 10-15 ದಿನಗಳ ನಂತರ, ಬಿತ್ತನೆಗೆ ಒಂದು ದಿನ ಮುಂಚಿತವಾಗಿ ದೊಡ್ಡ ಗಡ್ಡೆಗಳನ್ನು ಕಣ್ಣುಗಳ ಆಧಾರದ ಮೇಲೆ ಕತ್ತರಿಸಬೇಕು. ಕ್ಕ ಗಡ್ಡೆಗಳನ್ನು ಸಂಪೂರ್ಣವಾಗಿ ಬಳಸಬಹುದು. ಈ ಗಡ್ಡೆಗಳನ್ನು ದುಂಡಾಣು ಹಾಗೂ ಶಿಲೀಂಧ್ರ ನಾಶಕಗಳ ಮಿಶ್ರಣದ ದ್ರಾವಣದಲ್ಲಿ (ಮ್ಯಾಂಕೋಜೆಬ್ + ಕಾಬರ್ಂಡೈಜಿಮ್ ಶಿಲೀಂಧ್ರ ನಾಶಕ (ಒಂದು ಲೀಟರ್ ನೀರಿಗೆ 3 ಗ್ರಾಂ ಔಷಧಿ) 10-15 ನಿಮಿಷ ನೆನೆಸಿ ಬೀಜೋಪಚಾರ ಮಾಡಬೇಕು. 24 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿದ ನಂತರ ಬಿತ್ತನೆಗೆ ಉಪಯೋಗಿಸಬೇಕು.

ಜಿಲ್ಲೆಯ ಹಲವೆಡೆ ಮಳೆ ಪ್ರಾರಂಭವಾಗಿರುವಂತೆ ಗೋಚರಿಸಿದರೂ, ಮುಂಗಾರು ಮಳೆ ಇನ್ನು ಪ್ರಾರಂಭವಾಗಿಲ್ಲ. ಕನಿಷ್ಠ 3-4 ಉತ್ತಮವಾದ ಹದವಾದ ಮಳೆಯಾದ ನಂತರವೇ ಭೂಮಿಯ ತಾಪಮಾನ ಕಡಿಮೆಯಾಗುತ್ತದೆ. ಆಗ ಆಲೂಗಡ್ಡೆ ಬಿತ್ತನೆ ಮಾಡಬೇಕು. ಒಂದೆರಡು ಮಳೆಯಾಗುವುದು, ನಂತರ ಬಿಸಿಲು ಬರುವುದು ಇಂತಹ ಸಂದರ್ಭದಲ್ಲಿ ಬಿತ್ತನೆ ಮಾಡಿದರೆ, ಭೂಮಿನ ತಾಪಮಾನದಿಂದ ಗೆಡ್ಡೆಗಳು ಕೊಳೆಯುವ ಹಾಗೂ ಮೊಳಕೆ ಬರದಿರುವ ಸಾಧ್ಯತೆಗಳಿರುತ್ತವೆ ಎಂದು ಪ್ರಭುರಾಜ್‌ ತಿಳಿಸಿದ್ದಾರೆ.

ಆಲೂಗಡ್ಡೆ ಬಿತ್ತನೆ ಮಾಡಿರುವ ತಾಕುಗಳಲ್ಲಿ ಹೆಚ್ಚಿನ ಮಳೆಯಿಂದ ನೀರು ನಿಂತರೆ, ಗಡ್ಡೆಗಳು ಕೊಳೆಯುತ್ತವೆ. ರೈತರು ಆಲೂಗಡ್ಡೆ ಬಿತ್ತನೆಯಾಗಿರುವ ಜಮೀನುಗಳಲ್ಲಿ ಹೆಚ್ಚುವರಿ ಮಳೆ ನೀರು ಬಸಿದು ಹೋಗುವಂತೆ ಬಸಿಗಾಲುವೆ ವ್ಯವಸ್ಥೆ ಕಲ್ಪಿಸಬೇಕು.

ಹೆಚ್ಚಿನ ಮಳೆಯಾದಂತಹ ಸಂದರ್ಭದಲ್ಲಿ ಗಡ್ಡೆಗಳು ಕೊಳೆಯದಂತೆ ನೋಡಿಕೊಳ್ಳಲು, ನೀರಾವರಿ ವ್ಯವಸ್ಥೆ ಇರುವ ರೈತರು, ಏರು ಮಡಿ ಮಾದರಿಯಲ್ಲಿ (ಶುಂಠಿ ಬೇಸಾಯ ಮಾದರಿ) ಬೇಸಾಯ ಮಾಡುವುದು ಸೂಕ್ತ ಎಂದು ತಿಳಿಸಿದ್ದಾರೆ.

-ಎಂ.ಎಸ್. ಅರ್ಚನಾ ಜಿಲ್ಲಾಧಿಕಾರಿಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕು. ಕಳಪೆ ಬೀಜ ಮಾರಾಟ ಆಗದಂತೆ ನಿಯಂತ್ರಣ ಮಾಡಬೇಕು. ಶೈತ್ಯಾಗಾರಗಳಲ್ಲಿ ಶೇಖ ರಿಸಿರುವ ಬಿತ್ತನೆ ಆಲೂಗಡ್ಡೆ ಗುಣಮಟ್ಟ ಹಾಳಾಗದಂತೆ ನೋಡಿಕೊಳ್ಳಬೇಕು. -ಎಚ್.ಎಸ್. ಪ್ರಭುರಾಜ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ22 ಸಾವಿರ ಟನ್ ಬಿತ್ತನೆ ಆಲೂಗಡ್ಡೆ ದಾಸ್ತಾನು ಮಾಡಲಾಗಿದೆ. ಇದು 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಸಾಕಾಗಲಿದೆ. ನಿಗದಿ ಮಾಡಿದ್ದು ಅಗತ್ಯಕ್ಕೆ ತಕ್ಕಂತೆ ರೈತರಿಗೆ ವಿತರಣೆ ಮಾಡಲಾಗುತ್ತಿದೆ.

Post a Comment

Previous Post Next Post