ಚಿಕ್ಕಮಗಳೂರು ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಕೆಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಸಂಜೆ ಒಂಟಿ ಸಲಗ ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ಭಯ ಸೃಷ್ಟಿ ಮಾಡಿದೆ.
ಸಂಜೆ ಮಂಗಳೂರು ಹಾಸನ ಸರ್ಕಾರಿ ಬಸ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾಗಿದೆ.
ಕಾಡಾನೆ ಕಂಡು ಚಾಲಕ ಬಸ್ ನಿಲ್ಲಿಸಿದ್ದು, ರಸ್ತೆ ಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾಡಾನೆ ಸ್ವಲ್ಪ ಸಮಯದ ನಂತರ ಏಳನೇ ತಿರುವಿನ ಮತ್ತೊಂದು ಭಾಗದಲ್ಲಿ ಹೋಗಿ ನಿಂತಿದೆ. ಬಸ್‌ನ ಹಿಂದೆ ಹಲವು ವಾಹನಗಳು ಅರ್ಧ ಗಂಟೆಗೂ ಅಧಿಕ ಕಾಲ ಸಾಲುಗಟ್ಟಿ ನಿಂತಿದ್ದು ಒಂದೊಂದೇ ವಾಹನಗಳು ನಿಧಾನವಾಗಿ ಪಾಸ್ ಆದವು. ಬಸ್ ಕಾಡಾನೆಯಿಂದ ತುಸು ದಾಟಿದ ನಂತರ ಪ್ರಯಾಣಿಕರೆಲ್ಲರೂ ನಿಟ್ಟುಸಿರು ಬಿಟ್ಟರು. ಅರಣ್ಯ ಅಧಿಕಾರಿಗಳು ಚಾರ್ಮಾಡಿ ಘಾಟಿನಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ನಿರ್ಬಂಧಿಸಿ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.