ಅರಕಲಗೂಡು: ರಂಜಾನ್ ಮಾಸದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಗೆ ನಿರ್ಬಂಧ ವಿಧಿಸಲಾಗಿದ್ದು ಸರ್ಕಾರದ ಆದೇಶ ಉಲ್ಲಂಘಿಸುವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಎಚ್ಚರಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಇದೇ ೨೪ರಿಂದ ರಂಜಾನ್ ಮಾಸ ಶುರುವಾಗಲಿದ್ದು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತಿಲ್ಲ. ಇಫ್ತಿಯಾರ್ ಕೂಟ, ಮಸೀದಿಗಳ ಮುಂದೆ ಸಮೋಸಾ ಮಾರಾಟಕ್ಕೆ ಕಡಿವಾಣ ಹಾಕಬೇಕು. ಮನೆಗಳಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈಗಾಗಲೇ ತಾಲೂಕಿನ ಹೋಬಳಿ ಕೇಂದ್ರಗಳು ಹಾಗೂ ಹಳ್ಳಿಗಳಿಗೆ ಭೇಟಿ ನೀಡಿದ್ದು ಮಸೀದಿಗಳಲ್ಲಿ ಕೆಲವರು ಸರ್ಕಾದ ಆದೇಶ ಪಾಲಿಸದಿರುವುದು ಕಂಡುಬಂದಿದೆ. ರಂಜಾನ್ ಮಾಸದಲ್ಲಿ ಲಾಕ್ ಡೌನ್ ಕಟ್ಟುನಿಟ್ಟಿನ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಮುಸ್ಲೀಂ ಮುಖಂಡರು ಸಮುದಾಯದ ಜನರಿಗೆ ಮಾಹಿತಿ ರವಾನಿಸಿ ಸಹಕರಿಸಬೇಕು ಎಂದರು.
ಸಿಪಿಐ ದೀಪಕ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು, ವೃದ್ಧರು, ಮಕ್ಕಳು ರಂಜಾನ್ ಮಾಸದಲ್ಲಿ ಉಪವಾಸ ಆಚರಣೆ ಸೂಕ್ತವಲ್ಲವೆಂದು ಹೇಳಿದೆ. ಸಮುದಾಯದ ಬಾಂಧವರು ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ದರಪಟ್ಟಿ ಪ್ರಕಟಿಸಿ: ಲಾಕ್ ಡೌನ್ ಲಾಭ ದುರ್ಬಳಕೆ ಮಾಡಿಕೊಂಡು ಕೆಲವು ಅಂಡಿಗಳ ಸಾಮಾನುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಜನರ ಸುಲಿಗೆ ಮಾಡಲಾಗುತ್ತಿದೆ. ಎಲ್ಲ ಮಾಲೀಕರು ಅಂಗಡಿಗಳ ಮುಂದೆ ಕಡ್ಡಾಯವಾಗಿ ದರ ಪಟ್ಟಿ ಪ್ರಕಟಿಸಬೇಕು. ದಿನಬಳಕೆ ವಸ್ತುಗಳನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಮಟನ್ ಮತ್ತು ಚಿಕನ್ ಅನ್ನು ನಿಗದಿತ ದರದಲ್ಲೇ ಮಾರಾಟ ಮಾಡಬೇಕು ಎಂದು ಸೂಚಿಸಿದರು.
ತಾಲೂಕು ಆಡಳಿತವು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ಲಾಕ್ ಡೌನ್ ನಿಯಮಗಳನ್ನು ಕಟಿಬದ್ಧವಾಗಿ ಪಾಲಿಸಲು ಶ್ರಮಿಸಲಾಗುತ್ತಿದೆ. ಚೆಕ್ ಪೋಸ್ಟ್ ಗಳಲ್ಲಿ ಹೊರಗಿನವರ ಪ್ರವೇಶ ನಿಷೇಧಿಸಲಾಗಿದೆ. ನಿನ್ನೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಭೇಟಿ ನೀಡಿ ಪರಿಶೀಲಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರ ಸಹಕಾರದಿಂದ ತಾಲೂಕಿನಲ್ಲಿ ಕರೊನಾ ಸೋಕಿತರು ಒಬ್ಬರೂ ಕಾಣಿಸಿಕೊಂಡಿಲ್ಲ, ಇದು ಸಂತಸದ ಸಂಗತಿ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಸುರೇಶ್ ಬಾಬು, ಸಬ್ ಇನ್ಸ್ ಪೆಕ್ಟರ್ ವಿಜಯಕೃಷ್ಣ, ಪೇಟೆ ಜಾಮೀಯಾ ಮಸೀದಿ ಅಧ್ಯಕ್ಷ ಅತಿಖುರ್ ರೆಹಮಾನ್, ಕೋಟೆ ಅಖ್ಸಾ ಮಸೀದಿ ಅಧ್ಯಕ್ಷ ಸರ್ದಾರ್ ಅಹಮದ್, ಪಪಂ ಸದಸ್ಯರಾದ ಸುಭಾನ್ ಷರೀಫ್,ಅಬ್ದುಲ್ ಬಾಸಿತ್, ಮಾಜಿ ಉಪಾಧ್ಯಕ್ಷ ಸಲೀಂ ಅಹಮದ್, ಅಲೀಂ ಪಾಷಾ, ಮುಖಂಡರಾದ ನಸ್ರುಲ್ಲಾ, ಮುತಾಹೀರ್ ಪಾಷಾ ಇತರರು ಇದ್ದರು.
Tags
Hassan