ಹಾಸನ,ಮೇ.29:- ಜಿಲ್ಲೆಯ ಪರಿಸರಾಸಕ್ತರ ಬಹುದಿನಗಳ ಕನಸು ನನಸಾಗುವ ದಿನ ಹತ್ತಿರ ಬಂದಿದೆ. ನಗರದ ಸಮೀಪ ಇರುವ ಒಂದು ಸಾವಿರ ಎಕರೆ ವಿಸ್ತೀರ್ಣದ ಬುರುಡಾಳು ಬೋರೆಯಲ್ಲಿ ಬೆಳೆಯಲಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಅದನ್ನು ಜೀವ ವೈವಿಧ್ಯದ ತಾಣವಾಗಿರಬೇಕೆಂದು ಹಸಿರುಭೂಮಿ ಪ್ರತಿಷ್ಠಾನ ಮತ್ತಿತರ ಸಂಘಟನೆಗಳು ಅರಣ್ಯ ಇಲಾಖೆಗೆ ಕೆಲವು ವರ್ಷಗಳಿಂದ ಕೋರಿಕೆ ಸಲ್ಲಿಸುತ್ತಾ ಬಂದಿದ್ದವು.
ಬುರಡಾಳು ಬೋರೆಯಲ್ಲಿ ಹಂತ ಹಂತವಾಗಿ ನೀಲಗಿರಿ ಮರಗಳನ್ನು ತೆಗೆದು ಸ್ಥಳೀಯ ಜಾತಿಯ ವಿವಿಧ ಮರಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಮುಂದೆ ಬಂದಿದೆ. ಈ ಸಂಬಂಧವಾಗಿ ಗುರುವಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಶಂಕರ್ ಅವರ ಕಚೇರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪರಿಸರಾಸಕ್ತರು ನಡೆಸಿದ ಸಭೆಯಲ್ಲಿ ಮೊದಲ ಹಂತವಾಗಿ ಬುರಡಾಳು ಬೋರೆಯಲ್ಲಿ 125 ಎಕರೆ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಯ ಪ್ರಕಾರ ನೀಲಗಿರಿ ಗಿಡ ನೆಟ್ಟು 10 ವರ್ಷಗಳಾಗುವ ಮೊದಲು ಕಡಿತಲೆ ಮಾಡುವಂತಿಲ್ಲ, ಬುರಡಾಳು ಬೋರೆಯಲ್ಲಿ ನೆಟ್ಟಿರುವ ಮರಗಳ ಕ್ರಿಯಾಯೋಜನೆಗೆ ಪ್ರಸ್ತುತ ವರ್ಷ 10 ವರ್ಷ ಆಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಅವರು ವಿವರಣೆ ನೀಡಿದರು. ಈ ವರ್ಷ 50 ಹೆಕ್ಟೇರ್ ಪ್ರದೇಶದಲ್ಲಿ ಕಡಿತಲೆ ಮಾಡಿ 2021-22 ನೇ ಸಾಲಿನಲ್ಲಿ ನೆಡಲು ಅಗತ್ಯವಾದ ಗಿಡಗಳನ್ನು ಬೆಳೆಸುವ ಮತ್ತಿತರ ಪೂರಕ ಕಾರ್ಯಗಳ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆಯಬೇಕೆಂದು ಶಂಕರ್ ಅವರು ಸಿವರಾಂ ಬಾಬು ಅವರಿಗೆ ಸೂಚನೆ ನೀಡಿದರು.
ಒಂದು ಹೆಕ್ಟೇರ್ ತೆರವು ಗೊಳಿಸಿ ಹೊಸದಾಗಿ ಗಿಡನೆಡಲು ಅಂದಾಜು 1 ಲಕ್ಷ ರೂ.ನಂತೆ 50 ಹೆಕ್ಟೇರ್ ಪ್ರದೇಶಕ್ಕೆ 50 ಲಕ್ಷ ರೂ. ಆಗಬಹುದೆಂದು ಸಿವರಾಂ ಬಾಬು ಮಾಹಿತಿ ನೀಡಿದರು.
ಜೀವ ವೈವಿಧ್ಯತೆಯ ತಾಣ ಮಾಡುವ ಸಂದರ್ಭದಲ್ಲಿ ಮರಗಿಡಗಳನ್ನು ಪೆÇೀಷಿಸಲು ಹಾಗೂ ರಕ್ಷಿಸಲು ಶಾಲಾ-ಕಾಲೇಜುಗಳು,ವಿದ್ಯಾರ್ಥಿಗಳು ಹಾಗು ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹೆಮ್ಮಿಗೆ ಮೋಹನ್, ಹಸಿರುಭೂಮಿ ಪ್ರತಿಷ್ಠಾನ ಅಧ್ಯಕ್ಷ ಟಿ.ಹೆಚ್. ಅಪ್ಪಾಜಿಗೌಡ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ವಲಯ ಅರಣ್ಯಾಧಿಕಾರಿ ಜಗದೀಶ್, ಹಸಿರುಭೂಮಿ ಪ್ರತಿಷ್ಠಾನದ ಆರ್.ಪಿ. ವೆಂಕಟೇಶಮೂರ್ತಿ, ವೈ.ಎನ್. ಸುಬ್ಬಸ್ವಾಮಿ, ಪುಟ್ಟಯ್ಯ ಮತ್ತು ಎಲ್.ಆರ್. ವೆಂಕಟೇಶ್ ಭಾಗವಹಿಸಿದ್ದರು.
ಮೊದಲ ಹಂತದಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ತೆಗೆದು, ಜೈವಿಕ ಅರಣ್ಯ ಬೆಳೆಸಲು ಅಗತ್ಯವಾದ ಹಣವನ್ನು ರಾಜ್ಯ ಸರ್ಕಾರದಿಂದ ಕೊಡಿಸುವುದಾಗಿ ಶಾಸಕ ಪ್ರೀತಂ ಜೆ.ಗೌಡ ಅವರು ಹಸಿರು ಭೂಮಿ ಪ್ರಷ್ಠಾನ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
Tags
ಹಾಸನ