– ಪರೀಕ್ಷಾ ಕೊಠಡಿಗಳ ಸ್ಯಾನಿಟೈಜೇಷನ್
ಕೊರೊನಾ ಆತಂಕದ ನಡುವೆ ಜೂನ್ 18 ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷೆಯ ಪರೀಕ್ಷೆಗೆ ಗಡಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪರೀಕ್ಷೆಗೆ ಎರಡು ದಿನ ಮುಂಚೆಯೇ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಜೇಷನ್ ಮಾಡಲಾಗಿದೆ. ಜಿಲ್ಲೆಯಲ್ಲಿ 16 ಪರೀಕ್ಷಾ ಕೇಂದ್ರಗಳ 314 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಕೊಠಡಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.
ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಕೊಠಡಿಯಲ್ಲಿ ಕನಿಷ್ಠ 12 ರಿಂದ ಗರಿಷ್ಠ 24 ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳುವಂತೆ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ 6,535 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಿಗೆಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಿಂದ ಉಚಿತವಾಗಿ ಮಾಸ್ಕ್ ನೀಡಲಾಗಿದೆ.
ಈಗಾಗಲೇ ಪರೀಕ್ಷೆ ಕೇಂದ್ರಗಳಿಗೆ ರವಾನಿಸಲಾಗಿದೆ. ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಲಿದ್ದರೂ ವಿದ್ಯಾರ್ಥಿಗಳು ಬೆಳಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಗಳಿಗೆ ಬರಲು ಅವಕಾಶ ಮಾಡಿಕೊಡಲಾಗಿದೆ.
ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಇದಕ್ಕಾಗಿ ಆರೋಗ್ಯ ಸಹಾಯಕರನ್ನು ಪರೀಕ್ಷಾ ಕೇಂದ್ರಗಳಿಗೆ ಸೂಚಿಸಿದೆ.