ಹಾಸನ: ಸರ್ಕಾರ ಹಾಸನಕ್ಕೆ ನಿಗದಿಯಾದ ತೋಟಗಾರಿಕೆ ಕಾಲೇಜ್ ಅನ್ನು ರದ್ದುಪಡಿಸಿದ ಹಿನ್ನೆಲೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅವರು ರದ್ದು ಮಾಡಿದ್ರೆ ನನಗೆ ಮಾಡಿಕೊಳ್ಳೋಕೆ ಗೊತ್ತು. ನಾನೇನು ಸುಮ್ಮನೆ ಕುಳಿತುಕೊಳ್ಳುತ್ತೀನಾ(?) ಯಡಿಯೂರಪ್ಪ ಏನು ಶಾಶ್ವತವಾಗಿ ಇರ್ತಾನಾ(?) ನಾನು ಬದುಕಿರುವಾಗಲೇ ಹಾಸನದಲ್ಲಿ ತೋಟಗಾರಿಕೆ ಕಾಲೇಜು (Horticulture Collage) ಮಾಡುತ್ತೇನೆ. ಈ ದೇವೇಗೌಡರ ಮಗನಿಗೆ ದುಡ್ಡು ತರೋದು ಗೊತ್ತಿದೆ ಎಂದು ಹೆಚ್.ಡಿ ರೇವಣ್ಣ ಅವರು ಸಿಎಂ ಬಿಎಸ್ವೈ ವಿರುದ್ಧ ಗುಡುಗಿದ್ದಾರೆ.
PWD, ನೀರಾವರಿಗೆ ಸೇರಿದ ಸಣ್ಣ ಗುತ್ತಿಗೆದಾರರ ನೂರಾರು ಕೋಟಿ ಹಣ ತಡೆಹಿಡಿಯಲಾಗಿದೆ. ಗುತ್ತಿಗೆದಾರರು ಒಡವೆ ಅಡವಿಟ್ಟಿದ್ದಾರೆ. ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ನಡೀತಿದೆ. ನಮ್ಮ ಬಾಲಕೃಷ್ಣ, ಶಿವಲಿಂಗೆಗೌಡ ಕಡೆಯವರು ದುಡ್ಡು ಕೊಟ್ಟು ಕಾಮಗಾರಿ ಹಾಕಿಸಿಕೊಂಡು ಬಂದರು(!) ಆ ಕೆಲಸವೆಲ್ಲಾ ಬಾಕಿಯಾದವು ಎಂದು ರೇವಣ್ಣ ಅವರು ತಮ್ಮ ಪಕ್ಷದ ಶಾಸಕರ ಕಡೆಯವರೇ ಹಣ ನೀಡಿ ಕಾಮಗಾರಿ ಹಾಕಿಸಿಕೊಂಡು ಬಂದ ಬಗ್ಗೆ ಬಾಯಿಬಿಟ್ಟಿದ್ದಾರೆ.
ಅದುವಲ್ಲದೇ, ಯಡಿಯೂರಪ್ಪನವರು ಇದನ್ನು ಗಮನಿಸಿ, ವಯಸ್ಸಾದ ಟೈಂನಲ್ಲಿ ಹೀಗೆ ರಾಜಕಾರಣ ಮಾಡಬೇಡಿ. ಹೇಮಾವತಿ ನೀರಾವರಿಯಲ್ಲಿ ಶೇ.8ರಷ್ಟು ಹಣ ನೀಡಿದವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತಿದೆ. ಮೋದಿ ನಮ್ಮ ಸರ್ಕಾರವನ್ನು ಎಂಟು ಪರ್ಸೆಂಟ್ ಸರ್ಕಾರ ಅಂತಿದ್ರು, ಈಗ ಏನು ಹೇಳ್ತಾರೆ. ಎರಡುವರೆ ಲಕ್ಷ ಕಾಮಗಾರಿ ಕೆಲಸ ಮಾಡಿಸಲು ಚೀಫ್ ಇಂಜಿನಿಯಡ್ಗೆ ಮಾಹಿತಿ ನೀಡಬೇಕು ಅವರಿಗೂ ಹಣ ಕೊಡಬೇಕು. ಆ ಪರಿಸ್ಥಿತಿ ಜಿಲ್ಲೆಯಲ್ಲಿದೆ ಎಂದು ಅವರು ಆರೋಪ ಮಾಡಿದರು.
ಸದ್ಯ ಕೃಷಿ ಭೂಮಿ ಬಗ್ಗೆ ಸರ್ಕಾರ ತಂದಿರೋ ನೀತಿ ರೈತರನ್ನು ಒಕ್ಕಲೆಬ್ಬಿಸೋ ನೀತಿ. ಸರ್ಕಾರ ಲ್ಯಾಂಡ್ ಮಾಫಿಯಾ ಜೊತೆ ಇದೆ. ಮೋದಿಯವರು ಕಣ್ಮುಚ್ಚಿ ಕುಳಿತ್ತಿದ್ದಾರೆ. ಮೋದಿ ಬರೀ ಪಾಕಿಸ್ತಾನ, ಲಡಾಕ್ ನೋಡುತ್ತಿದ್ದಾರೆ. ನನ್ನ ತೋಟವನ್ನೇ ಪಾಳು ಅಂತ ಬರೆದಿದ್ದಾರೆ ಇನ್ನು ಸಾಮಾನ್ಯರ ಕಥೆ ಏನು(?) ಎಂದರು.
ಹಾಸನ ಜಿಲ್ಲಾ ಪಂಚಾಯ್ತಿಯಲ್ಲಿ ಸಾಮಾನ್ಯ ಸಭೆ ಕರೆಯಿರಿ ಅಂದ್ರೆ ಸಭೆ ಕರೆದಿಲ್ಲ. ಮುಂದೆ 24 ಜನ ಸದಸ್ಯರು ಧರಣಿ ಮಾಡುತ್ತೇವೆ. ಲಾಕ್ಡೌನ್ ವೇಳೆ ಹೂವಿನ ಬೆಳೆ ನಷ್ಟ, ಇತರೆ ನಷ್ಟದ ಹಣ ಇನ್ನು ಯಾರ ಅಕೌಂಟಿಗೂ ಬಂದಿಲ್ಲ ಎಂದು ಅವರು ಹೇಳಿದರು.
Tags
ಹಾಸನ