ಘನ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳ ಸೂಕ್ತ ನಿರ್ವಹಣೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹಸಿ ಕಸ ಹಾಗೂ ಒಣಕಸವನ್ನು ಬೇರೆ ಬೇರೆಯಾಗಿ ಶೇಖರಿಸುವಂತೆ ಹಾಗೂ ಅದರ ನಿರ್ವಹಣೆಗಾಗಿ ಕಡ್ಡಾಯವಾಗಿ ಮನೆಗಳ ಬಳಿ ಬರುವ ವಾಹನಕ್ಕೆ ಕಸ ಹಾಕುವಂತೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಘನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಕುರಿತಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ತ್ಯಾಜ್ಯಗಳ ನಿರ್ವಹಣೆಯ ಬಗ್ಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳು ಹಾಗೂ ಮನೆಗಳಿಗೆ ಸ್ಟಿಕ್ಕರ್‍ಗಳನ್ನು ಅಂಟಿಸುವ ಮೂಲಕ ಹೆಚ್ಚು ಅರಿವು ಮೂಡಿಸಬೇಕು. ಈ ಸಲುವಾಗಿ ಪತ್ರಿಕಾ ಪ್ರಕಟಣೆ, ಎನ್.ಜಿ.ಓ ಗಳ ಅವಲಂಬನೆ ಹಾಗೂ ಇತರೆ ಅಗತ್ಯ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ವೇಳಾಪಟ್ಟಿ ಮಾಡಿಕೊಳ್ಳಿ ಎಂದು ತಿಳಿಸಿದರು.
ಕಸ ಸಂಗ್ರಹಿಸುವ ವಾಹನಗಳು ಪ್ರತಿನಿತ್ಯ ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಣೆ ಮಾಡಬೇಕು. ಇದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವುದು ಕಡಿಮೆಯಾಗುತ್ತದೆ ಎಂದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ತ್ಯಾಜ್ಯ ನಿರ್ವಹಣೆಗೆ ವಿಂಡ್ರೋ ಪ್ಲಾಟ್‍ಫಾರ್ಮ್‍ಗಳನ್ನು ನಿರ್ಮಿಸಲಾಗಿದ್ದು, ಆಯಾ ತಾಲ್ಲೂಕಿನ ಪ್ರತಿನಿತ್ಯದ ತ್ಯಾಜ್ಯವನ್ನು ಶೇಖರಿಸಿ ನಿರ್ವಹಣೆ ಮಾಡುವಷ್ಟು ಸಾಮಥ್ರ್ಯ ಇದೆಯೇ ಎಂಬುದರ ಬಗ್ಗೆ ಗಮನಹರಿಸಿ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಸಕಲೇಶಪುರ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಜಾಗ ಇಲ್ಲದಿರುವುದರಿಂದ, ಆದಷ್ಟು ಬೇಗ ಯಾವುದಾದರು ಸರ್ಕಾರಿ ಜಾಗವನ್ನು ಗುರುತಿಸಿ ಎಂದರಲ್ಲದೆ, ತ್ಯಾಜ್ಯ ನಿರ್ವಹಣೆಗೆ ಗುರುತಿಸುವ ಜಾಗವು ಖಾಲಿ ಜಾಗವಾಗಿರಬೇಕು ಹಾಗೂ ಬೆಳೆಗಾರರಿಗೆ ಮತ್ತು ತೋಟಗಳಿಗೆ ಇದರಿಂದ ಸಮಸ್ಯೆಯಾಗಬಾರದು, ಅಂತಹ ಜಾಗವನ್ನು ಗುರುತಿಸಿ ವರದಿ ನೀಡಿ ಎಂದು ಅವರು ತಿಳಿಸಿದರು.
ತಾಲ್ಲೂಕುಗಳಲ್ಲಿ ಜೈವಿಕ ತ್ಯಾಜ್ಯಗಳಿಂದ ತಯಾರಿಸಲಾದ ಗೊಬ್ಬರವನ್ನು ಕೆ.ಜಿ ಗೆ 2.5 ರೂನಂತೆ ರೈತರಿಗೆ ನೀಡುವ ವ್ಯವಸ್ಥೆ ಮಾಡಿ. ಇದರಿಂದ ರಸಗೊಬ್ಬರಗಳಿಗಿಂತ ಕಡಿಮೆ ದರದಲ್ಲಿ ರೈತರಿಗೆ ಉತ್ತಮ ಜೈವಿಕ ಗೊಬ್ಬರ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಘನ ತ್ಯಾಜ್ಯಗಳನ್ನು ಹಾಕುವ ಜಾಗದ ಸುತ್ತ ಎರಡು ಸಾಲಿನಲ್ಲಿ ಗಿಡಗಳನ್ನು ನೆಡಿಸಿ. ಇದರಿಂದ ತ್ಯಾಜ್ಯಗಳಿಂದ ಬರುವ ವಾಸನೆಯು ಹೊರಗಿನ ವಾತಾವರಣಕ್ಕೆ ಸೇರುವುದು ಕಡಿಮೆಯಾಗುತ್ತದೆ ಹಾಗೂ ಸುತ್ತಮುತ್ತಲಿನ ಪ್ರದೇಶವೂ ಸ್ವಚ್ಛವಾಗಿರುತ್ತದೆ ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್ ಅವರು ಮಾತನಾಡಿ ವಿಂಡ್ರೋ ವಿಧಾನವನ್ನು ಅಳವಡಿಸುವುದರಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಂತ್ರದ ಸಹಾಯದಿಂದ ಪ್ಲಾಸ್ಟಿಕ್ ಬೊರ್ಡ್‍ಗಳನ್ನು ಮಾಡಿ ಮರುಬಳಕೆ ಮಾಡಬಹುದು, ಇದರಿಂದ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. ಹಾಗಾಗಿ ಎಲ್ಲಾ ತಾಲ್ಲೂಕುಗಳಲ್ಲಿಯೂ ಈ ವಿಧಾನವನ್ನು ಅಳವಡಿಸುವುದು ಸೂಕ್ತ ಎಂದರು.
ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಸವರಾಜು, ನಗರಾಭಿವೃದ್ಧಿ ಕೋಶದ ಯೊಜನಾ ನಿರ್ದೇಶಕರಾದ ಬಿ.ಎ ಜಗದೀಶ್, ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Tags
ಹಾಸನ