ಪಡೆದ ಸಾಲವನ್ನು ಸಕಾಲಕ್ಕೆ ಹಿಂತಿರುಗಿಸಿ: ಡಿ.ಎಸ್ ಅರುಣ್


 
ಹಾಸನ.ಜೂ.19:- ಸಾಲ ಪಡೆದ ಫಲಾನುಭವಿಗಳು ಸಮಾಜ ಕಟ್ಟುವ ಕೆಲಸ ಮಾಡಬೇಕು. ಇದು ಅಲ್ಪ ಮೊತ್ತವಾದರೂ ಅದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಕೆಲಸಕ್ಕೆ ಬಳಸಿ ಅಭಿವೃದ್ಧಿ ಹೊಂದಬೇಕು ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್ ಅವರು ತಿಳಿಸಿದ್ದಾರೆ.
ಹಾಸನದ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಕುವೆಂಪು ನಗರದಲ್ಲಿರುವ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು ಜಿಲ್ಲೆಯಿಂದ 38 ಫಲಾನುಭವಿಗಳಿಗೆ ತಲಾ 65 ಸಾವಿರ ರೂಗಳನ್ನು ನೀಡಲಾಗುತ್ತಿದೆ ಎಂದರು.
.

ಕರ್ನಾಟಕ ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಯೋಜನೆಗಳನ್ನು ಇದೇ ಮೊದಲ ಬಾರಿಗೆ ರಾಜ್ಯಾದಾದ್ಯಂತ ಆರಂಭಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್ ತಿಳಿಸಿದರು.

ಆರ್ಯ ವೈಶ್ಯ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ ಆರಂಭಿಸಲಾಗಿದೆ ಈ ಯೋಜನೆಯಡಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶೇ.2ರ ಬಡ್ಡಿದರದಲ್ಲಿ ಗರಿಷ್ಠ 1 ಲಕ್ಷರೂ ಶೈಕ್ಷಣಿಕ ಸಾಲ ಮಂಜೂರು ಮಾಡಲಾಗುವುದು ಎಂದು ಹೇಳಿದರು.
 
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುವುದು. ಸಾಂಪ್ರದಾಯಿಕ ವೃತ್ತಿಗಳಲ್ಲದೆ ಹಸು ಸಾಕಾಣಿಕೆ, ಸೇವಾ ಚಟುವಟಿಕೆಗಳು ಚಕ್ಕಲಿ, ನಿಪ್ಪಟ್ಟು ತಯಾರಿಸಿ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಸಹ ಈ ನೆರವು ಪಡೆದುಕೊಳ್ಳಬಹುದು. ಯೋಜನೆಯಡಿ ಕನಿಷ್ಠ 50 ಸಾವಿರ ರೂ. ನೆರವು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ. 20 ರಷ್ಟು ಸಹಾಯಧನವಾಗಿ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು. ಅರ್ಜಿದಾರರು 45 ವರ್ಷಕ್ಕಿಂತ ಒಳಗಿನವರಾಗಿರಬೇಕು ಎಂದು ಡಿ. ಎಸ್. ಅರುಣ್ ತಿಳಿಸಿದರು.

ನಿಗಮದ ಯೋಜನೆಯ ನೆರವು ಸುಲಭವಾಗಿ ಪಡೆಯಲು ಹಾಗೂ ಶಾಲಾ ಪ್ರವೇಶಕ್ಕೆ ಸಲ್ಲಿಸಲು, ಸರ್ಕಾರಿ ಸಂಸ್ಥೆಗಳಿಂದ ಸಾಲ ಸೌಲಭ್ಯ, ಸಹಾಯಧನ ಮತ್ತು ತರಬೇತಿ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿದೆ. ಆದರೆ ಈ ಮೊದಲು ಜಾತಿ ಪ್ರಮಾಣ ಪತ್ರ ನೀಡುತ್ತಿರಲಿಲ್ಲ. ಕ್ಯಾಬಿನೆಟ್‍ನಲ್ಲಿ ಅನುಮತಿ ಪಡೆದು ಡಿಸೆಂಬರ್ 16 ರಿಂದ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಇದರ ನೆರವು ಪಡೆದುಕೊಂಡು ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳು ಗಳೊಂದಿಗೆ ಈ ನಿಗಮದ ಯೋಜನೆಗಳಲ್ಲಿ ಸದುಪಯೋಗ ಪಡೆದುಕೊಳ್ಳಿ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಇತರ ಕುಟುಂಬಗಳಿಗೂ ಅನುಕೂಲ ಕಲ್ಪಿಸಲು ನೆರವಾಗಿ ಎಂದು ಅವರು ಮಾಹಿತಿ ನೀಡಿದರು.

ಆರ್ಯ ವೈಶ್ಯ ಸಮುದಾಯದವರು ಹೆಚ್ಚಾಗಿ ಆಹಾರ ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲಾ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಮೂರು ಗಾಲಿ ಹಾಗೂ ನಾಲ್ಕು ಗಾಲಿಗಳ ಫುಡ್‍ಟ್ರಕ್ ನೀಡಲಾಗುವುದು ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ.ಎಸ್. ಅರುಣ್ ಅವರು ಹೇಳಿದರು. 

ಪ್ರತಿ ಟ್ರಕ್ಕಿಗೆ 5 ಲಕ್ಷ ರೂ. ಗಳಾಗಲಿದೆ. ಟ್ರಕ್ ತಯಾರಿಕರ ಬಳಿಯೂ ಈ ಬಗ್ಗೆ ಚರ್ಚಿಸಲಾಗಿದೆ. ನೂರು ಟ್ರಕ್‍ಗಳನ್ನು ನೀಡಲು 5 ಕೋಟಿ ರೂಗಳ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಅವರು ಹೇಳಿದರು. 

ರಾಜ್ಯದಲ್ಲಿ 10 ಲಕ್ಷದಷ್ಟು ಆರ್ಯ ವೈಶ್ಯ ಸಮುದಾಯದವರಿದ್ದು ಸಮಾಜದ ಕಡು ಬಡವರನ್ನು ಮೇಲೆತ್ತುವ ಉದ್ದೇಶದಿಂದ ಸರ್ಕಾರವು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ ಅದರ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದರು.

ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಕೃಷ್ಣಕುಮಾರ್, ಸಮಾಜದ ಆರ್ಯ ವೈಶ್ಯ ಮಂಡಳಿಯ ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ಕಾಶಿನಾಥ್, ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಯುವ ಪರಿಷತ್ತಿನ ರವಿನಂದನ್, ಬೇಲೂರಿನ ನಾರಾಯಣ್ ಅವರು ಉಪಸ್ಥಿತರಿದ್ದರು.

Post a Comment

Previous Post Next Post