ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದ್ದಾರೆ.



ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು 11.6.2020ರ ಸರ್ಕಾರಿ ಆದೇಶದಂತೆ ಕೊಬ್ಬರಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತರಬೇಕಿದೆ ಎಂದರು.
ಕೇಂದ್ರ ಸರ್ಕಾರ ಬೆಂಬಲಬೆಲೆಯೊಂದಿಗೆ ಕೊಬ್ಬರಿ ಖರೀದಿಸಲು ನೆಫೆಡ್ ಸಂಸ್ಥೆಯನ್ನು ಗುರುತಿಸಿದ್ದು ರಾಜ್ಯ ಸರ್ಕಾರ ಸಹಕಾರ ಮಾರಾಟ ಮಂಡಳಿ ಮೂಲಕ ಖರೀದಿಸಲು ಸೂಚನೆ ನೀಡಿದ್ದು, ಅದರಂತೆ ನಾಳೆಯಿಂದ ಮುಂದಿನ 15 ದಿನಗಳ ಕಾಲ ರೈತರ ನೋಂದಣಿ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಅರಸೀಕೆರೆ ಹಾಗೂ ಚನ್ನರಾಯಪಟ್ಟಣಗಳಲ್ಲಿ ಎರಡು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಎಕರೆಗೆ 6 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಕೊಬ್ಬರಿ ಖರೀದಿಸಲು ಅವಕಾಶವಿದೆ. ಒಂದು ವೇಳೆ ಫ್ರೂಟ್ಸ್(ರೈತರ ನೊಂದಣಿ ಹಾಗೂ ಫಲಾನುಭವಿಗಳ ಕೇಂದ್ರಿಕೃತ ಮಾಹಿತಿ ವ್ಯವಸ್ಥೆ) ಐ.ಡಿ. ಇಲ್ಲದವರು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿ ಪಡೆಯಬಹುದಾಗಿದೆ. ಇದರಲ್ಲಿ ಆಧಾರ್ ಸಂಖ್ಯೆಯೊಂದಿಗೆ ಜೋಡಿಸಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರಾದ ಶ್ರೀಹರಿ ಅವರು ಅರಸೀಕೆರೆ, ಬೇಲೂರು ಹಾಗೂ ಹಾಸನ ತಾಲ್ಲೂಕುಗಳ ರೈತರು ಅರಸೀಕೆರೆ ಎ.ಪಿ.ಎಂ.ಸಿ ಯ ಖರೀದಿ ಕೇಂದ್ರದಲ್ಲಿ ಮತ್ತು ಚನ್ನರಾಯಪಟ್ಟಣದಲ್ಲಿ ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳ ರೈತರು ಚನ್ನರಾಯಪಟ್ಟಣ ಎ.ಪಿ.ಎಂ.ಸಿ.ಯ ಖರೀದಿ ಕೇಂದ್ರದಲ್ಲಿ ನೊಂದಣಿ ಮಾಡಿಕೊಳ್ಳಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕರಾದ ಡಾ|| ಮಧುಸೂದನ್, ತೋಟಗಾರಿಕಾ ಉಪನಿರ್ದೇಶಕರಾದ ಮಂಜುನಾಥ್ ಅವರು ಕೊಬ್ಬರಿ ಖರೀದಿ ವ್ಯವಸ್ಥೆ ನೋಂದಣಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ ಗುರುತಿನ ಚೀಟಿ ಹಾಗೂ ಹೊಸ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಕುರಿತು ವಿವರಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಡಾ|| ನವೀನ್ ಭಟ್ ಹಾಗೂ ಆಹಾರ ನಿಗಮ ಉಗ್ರಾಣ ನಿಗಮದ ಅಧಿಕಾರಿಗಳು ಹಾಜರಿದ್ದರು.
*******

Post a Comment

Previous Post Next Post