- ಇಂದು ದೇವೇಗೌಡರಿಂದ ನಾಮಪತ್ರ ಸಲ್ಲಿಕೆ
- ಬಿಜೆಪಿ ಮೂರನೇ , ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕದಿದ್ದರೆ ಅವಿರೋಧ ಆಯ್ಕೆ
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಹೆಚ್ ಡಿ ದೇವೇಗೌಡರು ಪಕ್ಷದ ಕಛೇರಿ ಜೆಪಿ ಭವನಕ್ಕೆ ಭೇಟಿ ನೀಡಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿ ಜೆಡಿಸ್ ನಾಯಕರು ಭಾಗಿಯಾಗಲಿದ್ದಾರೆ. ಹೆಚ್ ಡಿ ದೇವೇಗೌಡರ ಸ್ಪರ್ಧೆಗೆ ಎರಡೂ ರಾಷ್ಟ್ರೀಯ ಪಕ್ಷಗಳ ಅಡ್ಡಿಯಿಲ್ಲ. ಈಗಾಗಲೇ ಗೌಡರಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಲ್ಲ ಎಂದು ಹೇಳಿದೆ. ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಗೌಡರ ಆಯ್ಕೆಗೆ ಪರೋಕ್ಷ ಬೆಂಬಲಿಸಿದೆ.
ಇನ್ನು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಗೆ ಕೇಸರಿ ಪಡೆ ಸಹಾಯ ಮಾಡುವ ಸಾಧ್ಯತೆ ಇದೆ. ಕಾರಣ ಪ್ರಬಲ ಒಕ್ಕಲಿಗ ಜನಾಂಗದ ನಾಯಕ ರಾಜ್ಯಸಭೆ ವಿಚಾರದಲ್ಲಿ ರಾಜಕೀಯ ಬೇಡ ಜೊತೆಗೆ ದೇವೇಗೌಡರು ಹಿರಿಯರಿದ್ದು, ರಾಜ್ಯ ಸಭೆಗೆ ಪ್ರವೇಶಿಸಲಿ ಎಂಬ ಲೆಕ್ಕಾಚಾರ ಕಮಲ ಪಾಳಯದಾಗಿದೆ.
ಮತ್ತೊಂದು ಕಡೆ ಇಂದು ಬಿಜೆಪಿ ಅಭ್ಯರ್ಥಿಯಾಗಿ ಈರಣ್ಣ ಕಡಾಡಿ ಹಾಗೂ ಅಶೋಕ ಗಸ್ತಿ ನಾಮಪತ್ರ ಸಲ್ಲಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗಸ್ತಿ, ಈರಣ್ಣ ಕಡಾಡಿ ಹಾಗೂ ಹೆಚ್ ಡಿ ದೇವೇಗೌಡರು ಮಾತ್ರ ನಾಮಪತ್ರ ಸಲ್ಲಿಕೆಯಾದರೇ ಚುನಾವಣೆ ನಡೆಯುವುದು ಅನುಮಾನ. ಹಾಗಾಗಿ ಈ ನಾಲ್ವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Tags
ರಾಜ್ಯ