ಸಕಲೇಶಪುರ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರತಿಯೋರ್ವ ಕಾರ್ಯಕರ್ತರು ಆನ್‌ಲೈನ್‌ನಲ್ಲಿ ಭಾಗಿಯಾಗಿರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ವೀಕ್ಷಕ ಮಂಜುನಾಥ್ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 14 ರಂದು ಡಿ.ಕೆ ಶಿವಕುಮಾರ್, ಸತೀಶ್ ಜಾರಕಿಹೊಳೆ ಹಾಗೂ ಇತರರು ಪದಗ್ರಹಣ ಸಮಾರಂಭ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಆನ್‌ಲೈನ್ ಮುಖಾಂತರ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ. ಈ ಹಿಂದೆ ಕೆಪಿಸಿಸಿ ನೂತನ ಅಧ್ಯಕ್ಷರು ಪದಗ್ರಹಣ ಮಾಡುವ ಸಂಧರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರು ಹೋಗಿ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಕೋವಿಡ್ 19 ವಿಪತ್ತು ಇರುವುದರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜೂಮ್ ಆಪ್ ಬಳಸಿಕೊಂಡು ಕಾರ್ಯಕರ್ತರು ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತದೆ. ಡಿ.ಕೆ ಶಿವಕುಮಾರ್‌ರವರು ಅಧ್ಯಕ್ಷರಾಗುತ್ತಿರುವುದರಿಂದ ಕಾರ್ಯಕರ್ತರ ವಲಯದಲ್ಲಿ ನವ ಚೈತನ್ಯವುಂಟಾಗಿದ್ದು ತಾಲೂಕಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಲಾಗುವುದು ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾನುಬಾಳ್ ಭಾಸ್ಕರ್ ಮಾತನಾಡಿ ಡಿ.ಕೆ ಶಿವಕುಮಾರ್‌ರರ ಪದಗ್ರಹಣ ಕಾರ್ಯಕ್ರಮ ಕೊರೋನಾ ಲಾಕ್ ಡೌನ್‌ನಿಂದಿ ತಡವಾಗಿ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೋರ್ವ ಕಾರ್ಯಕರ್ತರು ಆನ್‌ಲೈನ್‌ನಲ್ಲಿ ಭಾಗಿಯಾಗಿರುವಂತೆ ಮಾಡಲು ಈಗಾಗಲೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಎರಡು ಪೂರ್ವಭಾವಿ ಸಭೆಗಳನ್ನು ಮಾಡಲಾಗಿದೆ.
ತಾಲೂಕು ಪಂಚಾಯತಿ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಯಡೇಹಳ್ಳಿ ಆರ್ ಮಂಜುನಾಥ್ ಮಾತನಾಡಿ ಕಾಂಗ್ರೆಸ್ ಪಕ್ಷ ಈ ದೇಶವನ್ನು ಕಟ್ಟಲಿಕ್ಕೆ ಹಾಗೂ ಸಂವಿಧಾನವನ್ನು ಉಳಿಸಲಿಕ್ಕೆ ಬಹಳ ಹೋರಾಟ ಮಾಡಿದೆ. ದಿವಂಗತ ರಾಜೀವ್ ಗಾಂಧಿ ಈ ದೇಶಕ್ಕೆ ತಂತ್ರಜ್ಞಾನ ತಂದರು. ಇಂದು ವಾಟ್ಸ್ ಆಪ್, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕೆಲವರು ಎಲ್ಲಾವನ್ನು ನಾವೆ ಮಾಡಿದ್ದು ಎಂದು ಹೇಳಿಕೊಂಡು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಸಹ ಯಾವುದೆ ರೀತಿಯ ಉತ್ತಮ ಅಭಿವೃದ್ದಿ ಕೆಲಸ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಸದ್ದಿಲ್ಲದೆ ಮೂಡುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ತಾಲೂಕು ಅಧ್ಯಕ್ಷ ದೊಡ್ಡಿರಯ್ಯ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಫಾರೂಕ್, ಪಕ್ಷದ ಯುವ ಮುಖಂಡ ಶೀತಲ್ ಸೇರಿದಂತೆ ಇತರರು ಹಾಜರಿದ್ದರು.
Tags
ಸಕಲೇಶಪುರ