ಹಾಸನ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಪಾವತಿಯಾಗಬೇಕಾಗಿರುವ ಗ್ರಂಥಾಲಯ ಕರವನ್ನು ವಸೂಲು ಮಾಡಿ ಗ್ರಂಥಾಲಯಗಳ ಅಭಿವೃದ್ಧಿ ಪಡಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಆರ್. ಗಿರೀಶ್ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ 2020-21ನೇ ಸಾಲಿನ ಹಾಸನ ಜಿಲ್ಲಾ ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರಗಳ ಆಯವ್ಯಯ ಸಭೆಯಲ್ಲಿ ಮಾತನಾಡಿದ ಅವರು ಹೊಸದಾಗಿ ನಿರ್ಮಾಣವಾಗುತ್ತಿರುವ ಸಕಲೇಶಪುರ ಹಾಗೂ ಆಲೂರು ಶಾಖಾ ಗ್ರಂಥಾಲಯಗಳಲ್ಲಿ ಕಟ್ಟಡಗಳ ಕಾಮಗಾರಿಯನ್ನು ನಿಗಧಿತ ಸಮಯದಲ್ಲಿ ಮುಗಿಸಿ ಸಾರ್ವಜನಿಕ ಓದುಗರಿಗೆ ಒದಗಿಸುವಂತೆ ನಿರ್ದೇಶನ ನೀಡಿದರು.
ಗ್ರಂಥಾಲಯಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹೇಳಿದರಲ್ಲದೆ, ಹಾಸನ ನಗರ ಗ್ರಂಥಾಲಯದಲ್ಲಿ ಓದುಗರಿಗೆ ವೈ.ಫೈ. ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸ್ವಾಮಿಯವರು ಮಾತನಾಡಿ ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಶೇಕಡವಾರು ಮೀಸಲಿಟ್ಟು ಗ್ರಂಥಾಲಯ ಕಟ್ಟಡ ನಿರ್ಮಿಸಲು ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುವಂತೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರಿಗೆ ಮನವಿ ಮಾಡಿದರು.
ಈ ಸಭೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಂದಾಜು ಆದಾಯ ರೂ. 1.10 ಕೋಟಿ ಹಾಗೂ ಅಂದಾಜು ಖರ್ಚು 99.53 ಲಕ್ಷ ರೂಗಳ ವಿವರಣಾ ಪಟ್ಟಿಯನ್ನು ಪರಿಶೀಲಿಸಿ ಅನುಮೋದಿಸಲಾಯಿತು.
ನಗರ ಗ್ರಂಥಾಲಯ ಪ್ರಾಧಿಕಾರದ ಅಂದಾಜು ಆದಾಯ 1.43 ಕೋಟಿ ರೂಗಳು ಹಾಗೂ ಅಂದಾಜು ಖರ್ಚು 1.35 ಕೋಟಿ ರೂಗಳ ವಿವರಣೆಗಳನ್ನು ಪರಿಶೀಲಿಸಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಲೋಲಾಕ್ಷಮ್ಮ, ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವಣ್ಣ, ಉಪನಿರ್ದೇಶಕರು ಹಾಗೂ ಜಿಲ್ಲಾ ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರ ಕಾರ್ಯದರ್ಶಿ ಸಿ.ಜೆ. ವೆಂಕಟೇಶ್ ಇತರರಿದ್ದರು.
Tags
ಹಾಸನ