ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯತಿಯಲ್ಲಿ ಹಾಸನ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಗ್ರಾಮ ಆರೋಗ್ಯ ಸೇವಾ ಕೇಂದ್ರಕ್ಕೆ ಚಾಲನೆ ಯನ್ನು ತಾ ಪಂ ಕಾರ್ಯನಿಹಣಾಧಿಕಾರಿ ಹರೀಶ್ ನೀಡಿದರು.
ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಜ್ವರ, ಶೀತ, ಮೈ ಕೈ ನೋವು, ರಕ್ತದ ಒತ್ತಡ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಮುಂತಾದ ಸಣ್ಣ ಪುಟ್ಟ ಪ್ರಾಥಮಿಕ ಹಂತದ ಪರೀಕ್ಷೆ ಮಾಡಿಸುವುದು, ಅವರು ನಗರ ಪ್ರದೇಶದ ಆಸ್ಪತ್ರೆಗಳಿಗೆ ಕೊವಿಡ್ ಸಂದರ್ಭದಲ್ಲಿ ಭೇಟಿ ನೀಡುವುದನ್ನು ತಪ್ಪಿಸುವುದು, ಆ ಮೂಲಕ ಕೊವಿಡ್ ರೋಗ ಹರಡದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಗ್ರಾಮ ಆರೋಗ್ಯ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಪ್ರಾಥಮಿಕ ಹಂತದ ಪರೀಕ್ಷೆ ನಡೆಸುವ ಸಲುವಾಗಿ Thermal scanner, Pulse oximeter, Glucometer, BP apparatus, Sanitizers, ಮಾಸ್ಕ್ ಗಳನ್ನು ಸರ್ಕಾರ ಹಾಗೂ ಸಾರ್ವಜನಿಕರಿಂದ ವಂತಿಕೆ ಮೂಲಕ ಖರೀದಿಸಿ ಸದರಿ ಕೇಂದ್ರಕ್ಕೆ ನೀಡಲಾಗಿದೆ. ಕಿರಿಯ ಆರೋಗ್ಯ ಸಹಾಯಕಿಯವರು ನೀಡಬಹುದಾದ ಮಾತ್ರೆಗಳನ್ನು ಒದಗಿಸಲಾಗಿದೆ. ಸದರಿ ಕೇಂದ್ರದಲ್ಲಿ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸಲು ಕಿರಿಯ ಆರೋಗ್ಯ ಸಹಾಯಕಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕೊರೊನಾ ವಾರಿಯರ್ ಗಳನ್ನು ನಿಯೋಜಿಸಲಾಗಿದೆ.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದೊಂದು ಗ್ರಾಮ ಆರೋಗ್ಯ ಸೇವಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದ್ದು 27 ರಂದು ಹೆಬ್ಬಸಾಲೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಆರೋಗ್ಯ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಗುತ್ತಿದೆ.
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್ ಕೆ ಅತೀಕ್ ರವರ ಸಲಹೆ ಮೇರೆಗೆ ಈ ಕೇಂದ್ರ ತೆರೆಯಲಾಗಿದೆ ಎಂದು ಹರೀಶ್ ತಿಳಿಸಿದರು.
ಈ ಕಾರ್ಯಕ್ಕೆ ಸಹಕರಿಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಹಿರಿಯ ಅಧಿಕಾರಿಗಳು, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿದಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹರೀಶ್ ಧನ್ಯವಾದ ತಿಳಿಸಿದ್ದಾರೆ.
Tags
ಸಕಲೇಶಪುರ