ಹಾಸನ: ಕಳೆದ ವರ್ಷ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಜನ ಮನೆಗಳನ್ನು ಕಳೆದುಕೊಂಡಿದ್ದು ಅವರೆಲ್ಲರಿಗೂ ಶೀಘ್ರವಾಗಿ ಮನೆ ನಿರ್ಮಿಸಿಕೊಡಲು ಕ್ರಮ ವಹಿಸುವಂತೆ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಡನೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಈ ಬಾರಿ ಪ್ರವಾಹವಾಗುವ ಮುನ್ನವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ಕೇಂದ್ರ ಸರ್ಕಾರದಿಂದ ವಿಪತ್ತು ನಿರ್ವಹಣಾ ಸಮಿತಿಗೆ ಹಣ ಬಂದಿದ್ದು, ಪ್ರವಾಹದ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಟ್ಟಡಗಳನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ನಿರ್ಮಿಸಬೇಕು ಎಂದು ಅವರು ಹೇಳಿದರು.
ಈ ಕಟ್ಟಡಗಳನ್ನು ವೈದ್ಯಕೀಯ ಸೌಲಭ್ಯ ಹಾಗೂ ಇತರೆ ವ್ಯವಸ್ಥೆಗಳಿಗೆ ಅನುಕೂಲವಾಗುವಂತೆ ನಿರ್ಮಿಸಿ, ಅದನ್ನು ಪ್ರವಾಹದ ಸಮಯವನ್ನು ಹೊರತುಪಡಿಸಿ ಇತರೆ ಸಂದರ್ಭಗಳಲ್ಲಿಯೂ ಅದನ್ನು ಬಳಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಇದರ ಜೊತೆಗೆ ಸರ್ಕಾರಿ ಶಾಲೆಗಳ ಆವರಣದಲ್ಲಿ ಉತ್ತಮ ಗುಣಮಟ್ಟದ ಸಮುದಾಯ ಭವನಗಳನ್ನು ನಿರ್ಮಿಸಿದರೆ, ಅವುಗಳನ್ನು ಪ್ರವಾಹ ಹಾಗೂ ಇತರೆ ಅಗತ್ಯ ಸಮಯಗಳಲ್ಲಿ ಬಳಸಿಕೊಳ್ಳಬಹುದು. ಉಳಿದ ಸಂದರ್ಭಗಳಲ್ಲಿ ಶಾಲೆಯ ಇತರೆ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇತರೆ ರಾಜ್ಯಗಳಲ್ಲಿ ಈಗಾಗಲೇ ಹಲವೆಡೆ ಪ್ರವಾಹದಿಂದಾಗಿ ಸಾಕಷ್ಟು ಹಾನಿಯುಂಟಾಗಿದ್ದು, ನಮ್ಮ ರಾಜ್ಯದಲ್ಲಿ ಈ ಬಾರಿ ಆ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದರು.
ಹೆಚ್ಚು ಮಳೆಯ ಕಾರಣದಿಂದಾಗಿ ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಅಗತ್ಯ ಸೌಲಭ್ಯಗಳಾದ ಶೌಚಾಲಯದ ವ್ಯವಸ್ಥೆ, ಚಾವಣಿ ಸೋರಿಕೆಯಾಗುವುದು ಇತರೆ ಮೂಲಭೂತ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಿಕೊಡಬೇಕು. ಇದಕ್ಕೆ ಅನುದಾನದ ಅವಶ್ಯಕತೆ ಇದ್ದಲ್ಲಿ ಪ್ರಸ್ತಾಪ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಹೊರ ರಾಜ್ಯಗಳಿಂದ ಬರುವ ನದಿಗಳಿಂದ ಉಂಟಾಗುವ ಪ್ರವಾಹದ ಬಗ್ಗೆ ಮುಂಜಾಗ್ರತೆ ವಹಿಸಿ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಮಲೆನಾಡು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಭೂಕುಸಿತ ಹೆಚ್ಚಾಗಿ ಸಂಭವಿಸುವುದರಿಂದ ಅಂತಹ ಸ್ಥಳಗಳನ್ನು ಗುರುತಿಸಿ ಸ್ಥಳೀಯ ಜನರಿಗೆ ಮಾಹಿತಿ ನೀಡಿ, ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಪ್ರವಾಹದ ಸಮಯದಲ್ಲಿ ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸಲು ಸ್ಥಳೀಯ 10 ಜನರನ್ನೊಳಗೊಂಡ ಸಮಿತಿ ರಚಿಸಿ, ಅವರಿಗೆ ಸೂಕ್ತ ತರಬೇತಿಯನ್ನು ನೀಡಿ ಕರ ಪತ್ರಗಳನ್ನು ಹಂಚುವುದು, ಡಂಗೂರ ಸಾರಿಸುವ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ತುರ್ತು ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಅಗ್ನಿಶಾಮಕ ಇಲಾಖೆಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಿ ಒದಗಿಸಲು ತಿಳಿಸಿದರು.
ಪ್ರವಾಹ ಹಾಗೂ ಇತರೆ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸಹಾಯಕ್ಕಾಗಿ 300 ಸಿಬ್ಬಂದಿಗಳನ್ನೊಳಗೊಂಡ ಎನ್.ಡಿ.ಆರ್.ಎಫ್ ತಂಡವನ್ನು ಮುಂದಿನ 30 ದಿನಗಳೊಳಗೆ ರಚಿಸಲಾಗುತ್ತಿದ್ದು, ಎಸ್.ಡಿ.ಆರ್.ಎಫ್ ತಂಡವನ್ನೂ ಸಹ ರಚಿಸಲಾಗುವುದು ಎಂದರು.
ಅಭಿವೃದ್ಧಿ ಆಯುಕ್ತರಾದ ವಂದಿತ ಶರ್ಮ ಅವರು ಮಾತನಾಡಿ ಲೋಕೋಪಯೋಗಿ ಇಲಾಖೆಯು ದುಸ್ಥಿತಿಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ ಕಳೆದಬಾರಿ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಭೂಕುಸಿತ ಹಾಗೂ ಹೇಮಾವತಿ ಜಲಾಶಯದಿಂದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಈ ಬಾರಿ ಈ ರೀತಿಯ ಅನಿರೀಕ್ಷಿತ ಅನಾಹುತಗಳನ್ನು ನಿರ್ವಹಿಸಲು ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದರಲ್ಲದೆ, ಕೋವಿಡ್ ಪರಿಸ್ಥಿತಿ ಇರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ಪರಿಸ್ಥಿತಿ ಇರುವುದರಿಂದ ಹೆಚ್ಚುವರಿ ನಿರಾಶ್ರಿತ ಕೇಂದ್ರಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ತುರ್ತು ಪರಿಸ್ಥಿತಿಯಲ್ಲಿ ರಕ್ಷಣಾ ವ್ಯವಸ್ಥೆಗಾಗಿ ಎಸ್.ಡಿ.ಆರ್.ಎಫ್ ತಂಡಗಳನ್ನು ನಿರ್ಮಿಸುವುದಾಗಿ ತಾವು ಸೂಚಿಸಿದ್ದು, ಹಾಸನದಲ್ಲಿಯೂ ಒಂದು ಪ್ರಧಾನ ಕಚೇರಿಯನ್ನು ಮಾಡಿದರೆ, ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸಚಿವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಉಪವಿಭಾಗಾಧಿಕಾರಿಗಳಾದ ಡಾ|| ನವೀನ್ ಭಟ್ ಮತ್ತು ಗಿರೀಶ್ ನಂದನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಮತ್ತಿತರರಿದ್ದರು.
Tags
ಹಾಸನ