ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ನಿಟ್ಟಿನಲ್ಲಿ ಪ್ರತಿಯ್ಬೊರು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ರೋಟರಿ ನಿವೃತ್ತ ಗವರ್ನರ್ ಗೋವರ್ಧನ್ ಕುಮಾರ್ ತಿಳಿಸಿದರು.
ನಗರದ ತಣ್ಣೀರುಹಳ್ಳಿ ಸಮೀಪದ ಎಂ.ಕೆ. ಸ್ವಾಮಿ ಪೆಟ್ರೊಲ್ ಬಂಕ್‍ನಲ್ಲಿ ಹಾಸನ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮತ್ತು ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳನ್ನು ಶೇಖರಿಸಲು ಕಸದ ಬುಟ್ಟಿಯನ್ನು ರೋಟರಿ ಸಾರ್ವಜನಿಕರ ಅನುಕೂಲಕ್ಕಾಗಿ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ತಮ್ಮ ಮನೆಯಲ್ಲಿನ ಕಸ ನಿರ್ವಹಣೆ ಹಾಗೂ ಅದನ್ನು ವಿಲೇವಾರಿ ಮಾಡುವ ವೇಳೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಬೇಕು ಎಂದು ಹೇಳಿದರು.
ರೋಟರಿ ಕಾರ್ಯದರ್ಶಿ ಚಂದ್ರಶೇಖರ್, ದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆ ದಿನೆ ದಿನೇ ಬಹುದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದ್ದು, ಇದರ ಬಗ್ಗೆ ಜನ ಸಾಮಾನ್ಯರು ಜಾಗೃತರಾಗದಿದ್ದರೆ ಮುಂದೊಂದು ದಿನ ಮತ್ತೊಂದು ಹೊಸ ಕಾಯಿಲೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದರು.
ಹಾಸನ ನಗರದಲ್ಲಂತೂ ಕಸದ ರಾಶಿಯನ್ನು ನಾವು ದಿನ ನಿತ್ಯ ಕಾಣಬಹುದಾಗಿದ್ದು, ವಿದ್ಯಾವಂತರು, ಪ್ರಜ್ಞಾವಂತರು ಎನ್ನಿಸಿಕೊಂಡುವರು ಸೇರಿದಂತೆ ಎಲ್ಲರೂ ತಮ್ಮ ಮನೆಯ ಕಸವನ್ನು ರಸ್ತೆಗೆ ತಂದು ಸುರಿಯುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರು, ಇಂದಿಗೂ ಸಂಪೂರ್ಣವಾಗಿ, ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿಲ್ಲ ಎಂದು ತಿಳಿಸಿದರು.
ಕಸವನ್ನು ವೈಜ್ಞಾನಿಕವಾಗಿ ಮನೆಯಲ್ಲಿಯೇ ಹಸಿ ಹಾಗೂ ಒಣ ಕಸವನ್ನಾಗಿ ಬೇರ್ಪಡಿಸಿ ನಗರಸಭೆ ನಿಗದಿ ಮಾಡಿರುವ ವಾಹನಗಳಲ್ಲಿ ಹಾಕಬೇಕು. ಜೊತೆಗೆ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ರೋಟರಿ ಅಧ್ಯಕ್ಷ ಜಯರಾಂ ಬಂಕ್ ಸಿಬ್ಬಂದಿಗೆ ಮಾಸ್ಕ್ ವಿತರಿಸಿದರು ಹಾಗೂ ಸಹಾಯಕ ಗವರ್ನರ್ ಕೆ. ಪಾಲಾಕ್ಷ ಬಟ್ಟೆಯ ಕೈ ಚೀಲವನ್ನು ವಿತರಿಸಿ, ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಚೀಲದ ಬಳಕೆಯನ್ನು ನಿಲ್ಲಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
Tags
ಹಾಸನ