ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಕುರಿತು ಪೂರ್ವಭಾವಿ ಸಭೆನಡೆಸಿ ಮಾತನಾಡಿದ ಅವರು ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಿಗಧಿತ ಸಮಯಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗುವುದು ಆದರೆ ಯಾವುದೇ ಮನರಂಜನಾ ಕಾರ್ಯಕ್ರಮಗಳಿಗೆ ಈ ಬಾರಿ ಅವಕಾಶವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ನಿವೃತ್ತ ಸೈನಿಕರ ತಂಡ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಅಂಡ್ ಗೈಡ್ ತಂಡಗಳು ಮಾತ್ರ ಪೆರೆಡ್ ನಡೆಸುವಂತೆ ಸೂಚಿಸಿದಲ್ಲದೆ, ಸುರಕ್ಷತೆ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು.
ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿ ಕೊರೋನಾ ವಾರಿಯರ್ಸ್‍ಗಳನ್ನು ಮಾತ್ರ ಸನ್ಮಾನಿಸಲಾಗುವುದು ಮತ್ತು ಕೊವೀಡ್-19 ನಿಂದ ಗುಣಮುಖರಾದ ವೈದ್ಯರು, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಹಂಚಿಕೆ ಮಾಡಿಸುವ ಮೂಲಕ ಸೋಂಕಿನ ಕುರಿತು ಸಾರ್ವಜನಿಕರಿಗೆ ಭಯ ನಿವಾರಣೆ ಮಾಡಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಮತ್ತು ಜಿಲ್ಲೆಯ ಜನಪ್ರತಿನಿಧಿಗಳನ್ನು ಶಿಷ್ಟಾಚಾರದನ್ವಯ ಆಹ್ವಾನಿಸಬೇಕು. ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಕಡಿಮೆ ಜನ ಸೇರಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಬೇಕೆಂದು ಅವರು ಹೇಳಿದರು.
ನಗರಸಭೆ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಸ್ವಚ್ಚತೆ ಮತ್ತು ಸ್ಯಾನಿಟೈಸ್ ಮಾಡಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶಿವಣ್ಣ ಮತ್ತಿತರರಿದ್ದರು.
Tags
ಹಾಸನ