ಸಹಾಯವಾಣಿ ನಿರ್ವಹಣಾ ಸಂಸ್ಥೆಗಳ ಕಾರ್ಯಕ್ಷಮತೆ ಗುರುತಿಸಿ: ಜಿಲ್ಲಾಧಿಕಾರಿ


ಹಾಸನ ಜಿಲ್ಲೆಯಲ್ಲಿ ಅಂಧಮಕ್ಕಳ ಶಾಲೆ, ಹಿರಿಯ ನಾಗರೀಕರ ಸಹಾಯವಾಣಿ ಹಾಗೂ ಅಂಗವಿಕಲರ ಪುನರ್ವಸತಿ ಕೇಂದ್ರಗಳನ್ನು ವಿವಿಧ ಸರ್ಕಾರೇತ್ತರ ಸಂಸ್ಥೆಗಳು ನಡೆಸುತ್ತಿದ್ದು, ಅವುಗಳ ಕಾರ್ಯಕ್ಷಮತೆ ಗುರುತಿಸಿ ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಬದಲಾಯಿಸಿ ಬೇರೆ ಸಂಸ್ಥೆಗಳಿಗೆ ಜವಾಬ್ದಾರಿ ನೀಡಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
 ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಕೆಲವು ಸಂಸ್ಥೆಗಳು ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಹಾಗೂ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಅಂತಹ ಸಂಸ್ಥೆಗಳನ್ನು ರದ್ದುಪಡಿಸಿ ಬೇರೆ ಸಂಸ್ಥೆಗಳನ್ನು ಗೊತ್ತುಪಡಿಸಿ ಎಂದು ಅವರು ಹೇಳಿದರು.
 ಅಂಗವಿಕಲರ ಪುನರ್ವಸತಿ ಕೇಂದ್ರದ ವತಿಯಿಂದ ಕೃತಕ ಕಾಲು ಹಾಗೂ ಕೈಗಳನ್ನು ನೀಡಲು ಟೆಂಡರ್ ಪ್ರಕ್ರಿಯೆ ರೀತಿಯಲ್ಲಿ ತಯಾರಕರನ್ನು ಕರೆದು, ಅರ್ಹ ಫಲಾನುಭವಿಗಳನ್ನು ಗುರುತಿಸಿ, ಆದಷ್ಟು ಬೇಗ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
 ಜಿಲ್ಲೆಯಲ್ಲಿನ ವೃದ್ಧಾಶ್ರಮಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆಶ್ರಮಗಳಲ್ಲಿ ನಿಗಧಿಗಿಂತ ಹೆಚ್ಚು ಫಲಾನುಭವಿಗಳು ಇರುವುದರಿಂದ ಸರ್ಕಾರ ನೀಡುತ್ತಿರುವ ಅನುದಾನ ಪರ್ಯಾಪ್ತವಾಗುತ್ತಿಲ್ಲವೆಂದು ಮನವಿ ಬಂದಿದೆ. ಈ ಸಂಬಂಧ ಅನುದಾನವನ್ನು ಹೆಚ್ಚಿಸಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆರ್. ಗಿರೀಶ್ ಸೂಚಿಸಿದರು.
 ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ದಿಲೀಪ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ  ಪ್ರಕಾಶ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Post a Comment

Previous Post Next Post