ಆಲೂರು : ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಗೊಳಪಡುವ ಹಲವು ಗ್ರಾಮಗಳಲ್ಲಿ ಹಗಲು ವೇಳೆಯಲ್ಲಿ ಕಾಡಾನೆಗಳು ಗ್ರಾಮಗಳಲ್ಲಿ ಸಂಚರಿಸುತ್ತಿರುವುದರಿಂದ ಜನಸಾಮಾನ್ಯರು ಭಯಭೀತರಾಗಿದ್ದಾರೆ. ಮನೆಯಿಂದ ಹೊರಬರಲಾರದ ಪ್ರತಿಯೊಬ್ಬರೂ ಯಾವ ಗಳಿಗೆಯಲ್ಲಿ ಕಾಡಾನೆ ಹಾವಳಿಗೆ ತುತ್ತಾಗುತ್ತಿವೆಯೊ ಎಂದು ಭಯಗ್ರಸ್ತರಾಗಿ ಮನೆಯಲ್ಲೆ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆಗಳ ಹಿಂಡು ಹಾವಳಿಯಿಂದ ಜನತೆ ತತ್ತರಿಸಿಹೋಗಿದ್ದಾರೆ ಸುಮಾರು 15 ರಿಂದ 30 ಕಾಡಾನೆಗಳ ಹಿಂಡೂ ಓಡಾಡುತ್ತಿತ್ತು. ಒಮ್ಮೆ ತಿರುಗಾಡಿಕೊಂಡು ಹೋದರೆ ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಾಗನೂರು, ಭೋಸ್ಮನಹಳ್ಳಿ, ಮಲಗಳಲೆ, ಆನೆಗಳಲೆ, ಕಟ್ಟೆಹೊಳೆ, ಹೊಂಕರವಳ್ಳಿ, ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸುವ ಕಾಡಾನೆಗಳು ರೈತರು ಬೆಳೆದಿರುವ ಲಕ್ಷಾಂತರ ರೂ ಬೆಳಬಾಳುವ ಕಾಫಿ ತೋಟಗಳು. ಬಾಳೆ ಗಿಡಗಳು. ಶುಂಠಿ ಏಲಕ್ಕಿ ಮೆಣಸು ಬೆಳೆಗಳನ್ನು ಸಂಪೂರ್ಣ ನಾಶಮಾಡುತ್ತಿವೆ. ಕಾಡಾನೆಗಳು ರಸ್ತೆಬದಿಯ ತೋಟದೊಳಗೆ ನಿಂತಿರುವುದು ಗೋಚರಿಸುವುದಿಲ್ಲ. ಇದರಿಂದ ಆ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ವಾಸ ಮಾಡುವ ಜನರು ಯಾವ ಸಮಯದಲ್ಲಿ ಕಾಡಾನೆಗಳು ಮೈಮೇಲೆ ಎರಗುತ್ತವೆ ಏನು ಅನಾಹುತವಾಗುತ್ತದೆ ಎಂದು ಭಯದಲ್ಲಿಯೇ ತಿರುಗಾಡುವಂತಾಗಿದೆ.
ಹಲವು ದಶಕಗಳಿಂದ ತಲೆದೋರಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರಕಾರ ಯಾವುದೆ ಶಾಶ್ವತ ಪ್ರಯತ್ನ ಮಾಡಲಿಲ್ಲ. ಪ್ರತಿ ವರ್ಷ ರೈತರು ಬೆಳೆದ ಬೆಳೆ ನಷ್ಟವಾಗುತ್ತಿದೆಯಲ್ಲದೆ ಅನೇಕ ಜನರು ಮತ್ತು ಆನೆಗಳು ಪ್ರಾಣ ತೆತ್ತಿದ್ದಾರೆ. ನಷ್ಟಕ್ಕೊಳಗಾದ ಬೆಳೆಗೆ ಕೈ ಖರ್ಚಿಗೆ ಆಗದಷ್ಟ ಪರಿಹಾರ ನೀಡುತ್ತಾ ಭರವಸೆಯಲ್ಲೆ ಸರ್ಕಾರ ಮುಂದೂಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಚಿವರು, ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಕಾರ್ಯತಂತ್ರ ರೂಪಿಸಬೇಕು ಎಂದು ಕೆ. ಹೊಸಕೋಟೆ ಹೋಬಳಿ ರೈತ ಘಟಕದ ಕಾರ್ಯದರ್ಶಿ ಜಯಣ್ಣ ತಿಳಿಸಿದ್ದಾರೆ.
ಕಾಡಾನೆಗಳು ಸಕಲೇಶಪುರ ತಾಲೂಕಿನಿಂದ ಆಲೂರು ತಾಲೂಕಿಗೆ ಬಂದಿದೆ ಈಗ ಗದ್ದೆ ಕೆಲಸ ಪ್ರಾರಂಭವಾಗುತ್ತಿದ್ದು ರೈತರ ಸಸಿಮಡಿಗಳನ್ನು ನಾಶಮಾಡುತ್ತಿವೆ. ಅಲ್ಲದೆ ಓಡಿಸಲು ತೀವ್ರತರ ಕ್ರಮವನ್ನು ಕೈಗೊಂಡರೆ ಆನೆ ಅಥವಾ ಮಾನವ ಪ್ರಾಣಕ್ಕೆ ಕುತ್ತಾದೀತು ಎಂಬ ಭಯದಿಂದ ಸಮಸ್ಯೆಗಳು ಎದುರಾಗದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಎಚ್ಚರಿಕೆ ವಹಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ರಾಜಪ್ಪ ತಿಳಿಸಿದ್ದಾರೆ .
Tags
ಆಲೂರು