ಹಾಸನ: ಅವಿನ್ನೂ ಇನ್ನೂ 2 ತಿಂಗಳು ತುಂಬದ ಕುರಿ ಹಾಗೂ ಮೇಕೆ ಮರಿಗಳು. ಕೆಲವಕ್ಕೆ 60 ದಿನ ತುಂಬಿದ್ದರೆ ಮತ್ತೆ ಕೆಲವು ಇನ್ನೂ ಹಾಲು ಕುಡಿಯುವ 15 ದಿನಗಳ ಮರಿಗಳು.
ಮಂದೆ ಕುರಿ ಅಥವಾ ಮೇಕೆಗಳ ಜೊತೆ ಸಣ್ಣ ಸಣ್ಣ ಮರಿಗಳು ನಡೆಯಲಾಗುವುದಿಲ್ಲ ಎಂಬ ಕಾರಣಕ್ಕೆ ಮಾಲೀಕರು ಶೆಡ್ ನಲ್ಲೇ ಸೊಪ್ಪು ತಂದು ಹಾಕಿ ತಾಯಿ ಕುರಿ ಹಾಗೂ ಮೇಕೆಗಳನ್ನು ಮೇಯಿಸಲು ಹೋಗಿದ್ದರು. ಆದರೆ ಭಾನುವಾರ ಮಧ್ಯಾಹ್ನ ಒಮ್ಮೆಗೇ ಮುದ್ದಾದ ಮರಿಗಳಿದ್ದ ಶೆಡ್ ಗೆ ನುಗ್ಗಿದ ತಾಯಿ ಚಿರತೆ ಹಾಗೂ 2 ಮರಿಗಳು 18 ಕುರಿ ಹಾಗೂ ಮೇಕೆ ಮರಿಗಳ ರಕ್ತ ಹೀರಿ ಜೀವ ತೆಗೆದಿವೆ. ಮತ್ತೆ 8 ಮರಿಗಳನ್ನು ಕಚ್ಚಿ ಗಾಯಗೊಳಿಸಿದ್ದು ಅವೂ ಕೂಡ ಸಾವು ಬದುಕಿನ ನಡುವೆ ಹೋರಾಡುತ್ತಿವೆ. ಮರಿಗಳ ಮಾಲೀಕರು ಕಣ್ಣೀರಿಡುತ್ತಿದ್ದಾರೆ.
ಘಟನೆ ವಿವರ:
ತಾಲೂಕಿನ ದೊಡ್ಡ ಬಾಗನ ಹಳ್ಳಿಯ ಪಾಂಡು, ಕುಮಾರ್ ಮತ್ತು ಮಂಜು ಎಂಬುವರು ನೂರಾರು ಆಡು ಮತ್ತು ಕುರಿಗಳನ್ನು ಒಟ್ಟಿಗೇ ಮೇಯಿಸುತ್ತಿದ್ದರು. ಪ್ರತಿ ವರ್ಷವೂ ಒಟ್ಟಾಗಿ ಬೇರೆ ಬೇರೆ ಕಡೆಗಳಿಗೆ ಮಂದೆ ತಡೆಯಲು ಹೋಗುತ್ತಿದ್ದರು. ಆದರೆ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಬೇರೆ ಕಡೆಗಳಿಗೆ ಹೋಗಲಾದೇ ಊರ ಸಮೀಪವೇ ತಾವೇ ಒಂದು ಶೆಡ್ ನಿರ್ಮಿಸಿಕೊಂಡು ಅಲ್ಲೇ ಮೇಕೆ ಮತ್ತು ಕುರಿಗಳನ್ನು ತಡೆದಿದ್ದರು.
ಕೊರೊನಾ ಸಂದರ್ಭದಲ್ಲಿ ಬೇರೆ ಕಡೆ ಹೋದರೆ ಜನರು ಅನುಮಾನಿಸುತ್ತಾರೆ ಎಂಬ ಕಾರಣಕ್ಕೆ ಕೊರೊನಾ ಭಯದಿಂದ ಈ ಬಾರಿ ಎಲ್ಲೂ ಹೋಗಿರಲಿಲ್ಲ. ಹೀಗಾಗಿ ಮರಿಗಳನ್ನು ಶೆಡ್ ಗಳಲ್ಲೇ ಕೂಡಿಹಾಕಿ ಎಂದಿನಂತೆ ದೊಡ್ಡ ಕುರಿ ಮತ್ತು ಆಡುಗಳನ್ನು ಮೇಯಿಸಲು ಹೋಗಿದ್ದರು.
ರಾತ್ರಿ ವೇಳೆ ರೈತರು ಆಡು-ಕುರಿಗಳ ಜೊತೆ ಶೆಡ್ ನಲ್ಲೇ ಮಲಗುತ್ತಿದ್ದರು.
ಮೂರು ಚಿರತೆ ದಾಳಿ:
ಅರಣ್ಯದ ಬಳಿಯೇ ಶೆಡ್ ಇದ್ದುದರಿಂದ ಜೊತೆಗೆ ಸುತ್ತಲೂ ಮೆಕ್ಕೆಜೋಳ ಮೊದಲಾದ ಬೆಳೆ ಬೆಳೆದಿದ್ದರಿಂದ ಮಧ್ಯಾಹ್ನ 2 ಗಂಟೆ ಸುಮಾರಿಗೆ ದಿಢೀರ್ ಶೆಡ್ಗೆ ನುಗ್ಗಿದ ತಾಯಿ ಚಿರತೆ ಮತ್ತು 2 ಮರಿಗಳು ಗುಂಪಾಗಿ ಇದ್ದ ಮೂಕ ಮರಿಗಳ ಮೇಲೆ ದಾಳಿ ಮಾಡಿವೆ. ಎಳೆಯ ಮರಿಗಳು ಅಂಬಾ ಎಂದು ಗೋಳಿಟ್ಟರೂ ಬಿಡದೇ ಕಚ್ಚಿ ರಕ್ತ ಹೀರಿ ಕೊಂದು ಹಾಕಿವೆ.
ಶೆಡ್ ಗಳಲ್ಲಿದ್ದ ಒಟ್ಟು 26 ಮರಿಗಳಲ್ಲಿ 18 ಮರಿಗಳು ಚಿರತೆ ಪಡೆಗೆ ಆಹಾರವಾಗಿವೆ. ಕೆಲ ಮರಿಗಳನ್ನು ಭಾಗಶಃ ತಿಂದು ಹಾಕಿವೆ.
ಕಾಲ ಮಿಂಚಿ ಹೋಗಿತ್ತು:
ಕಡೆಗೂ ಕುರಿ-ಮೇಕೆ ಮರಿಗಳು ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಚೀರಾಡುವುದನ್ನು ಕೇಳಿದ ಕೆಲ ಸ್ಥಳೀಯರು ಕೂಡಲೇ ಶೆಡ್ ಬಳಿಗೆ ಓಡಿ ಬಂದಿದ್ದಾರೆ. ಜನರನ್ನು ಕಂಡ ಮೂರು ಚಿರತೆಗಳು ಅಲ್ಲಿಂದ ಓಡಿ ಹೋಗಿವೆ. ಈ ದೃಶ್ಯವನ್ನು ಕೆಲವರು ಕಣ್ಣಾರೆ ಕಂಡಿದ್ದಾರೆ. ಆ ವೇಳೆ ಗಾಗಲೇ 18 ಮರಿಗಳ ಜೀವ ಹೋಗಿತ್ತು. ಉಳಿದವು ಅರೆ ಬರೆ ಜೀವದಲ್ಲಿ ಒದ್ದಾಡುತ್ತಿದ್ದವು. ಇದರಿಂದ ಭಯಗೊಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸುದ್ದಿ ತಿಳಿಸಿದರು. ನಂತರ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಡಪಾಯಿಗಳು ಕಂಗಾಲು:
ಮೊದಲೇ ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡಪಾಯಿಗಳು ಎಳೆಯ ಮರಿಗಳು ಬೆಳೆದು ದೊಡ್ಡವಾದರೆ ನಮ್ಮ ಬಡತನ ನೀಗಲು ಸಹಾಯವಾಗಲಿದೆ ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಅವರ ಆಸೆ ಈಗ ಮಣ್ಣು ಪಾಲಾಗಿದೆ. ಎಳೆಯ ಮರಿಗಳನ್ನು ಚಿರತೆಗಳು ಕೊಂದು ಹಾಕಿರುವುದರಿಂದ ಅಪಾರ ನಷ್ಟವಾಗಿದ್ದು, ಸಂಬಂಧಪಟ್ಟವರು ಭರಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಘಟನೆಯಿಂದ ಸಹಜವಾಗಿಯೇ ಭಯಭೀತರಾಗಿರುವ ಗ್ರಾಮಸ್ಥರು ಹಾಗೂ ರೈತರು, ಈ ಭಾಗದಲ್ಲಿ ಇತ್ತೀಚೆಗೆ ಚಿರತೆಗಳು ಹೆಚ್ಚಾಗಿದ್ದು, ಇಂಥದೇ ದುರಂತ ಘಟಿಸುವ ಮುನ್ನ ಚಿರತೆಗಳನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Tags
ಹಾಸನ