ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗಾಗಿ 10,000 ರೂ. ಸಾಲ ಸೌಲಭ್ಯ ನೀಡಲು ಅರ್ಹರನ್ನು ಗುರುತಿಸಿ ಅರ್ಜಿಗಳನ್ನು ಪಡೆದು ಸಾಲ ಸೌಲಭ್ಯ ನೀಡಲು ಕ್ರಮವಹಿಸುವಂತೆ ಅಧಿಕಾರಗಳಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್ ತಿಳಿಸಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಸಹಾಯ ಮಾಡುವ ಉದ್ದೇಶದಿಂದ ಸ್ವನಿಧಿ ಯೋಜನೆ ಜಾರಿಮಾಡಿದ್ದು, ಎಲ್ಲಾ ವ್ಯಾಪಾರಿಗಳು ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸುವಂತೆ ಅರಿವು ಮೂಡಿಸಿ ಎಂದು ಅವರು ತಿಳಿಸಿದರು.
ಈಗಾಗಲೇ ಒಂದು ಬಲಕ್ಷದ 20 ಸಾವಿರ ಜನಕ್ಕೆ ಗುರುತಿನ ಚೀಟಿ ನೀಡಿದ್ದು, ಪ್ರತಿಯೊಬ್ಬರಿಂದ ಅರ್ಜಿ ಪಡೆದು ಕೇಂದ್ರ ಸರ್ಕಾರದ ಪೋರ್ಟಲ್ ಮೂಲಕ ಅಪ್ಲೋಡ್ ಮಾಡಿದರೆ ಸಂಭಂದಪಟ್ಟ ಬ್ಯಾಂಕಿನಿಂದ ನೇರವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ದೊರೆಯುತ್ತದೆ ಹಾಗಾಗಿ ಗುರುತಿನ ಚೀಟಿ ಪಡೆದಿರುವವರ ಅರ್ಜಿಯನ್ನು ಶೀಘ್ರವಾಗಿ ಅಪ್ಲೋಡ್ ಮಾಡಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.
ರಾಜ್ಯದಲ್ಲಿ 3 ಲಕ್ಷ ಕ್ಕಿಂತ ಹೆಚ್ಚಿನ ಜನರಿಗೆ ಸಾಲ ನೀಡುವ ಗುರಿ ಇಟ್ಟುಕೊಂಡಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ಬೀದಿ ಬದಿ ವ್ಯಾಪಾರಿಗಳಿಂದ ಅರ್ಜಿ ಸಲ್ಲಿಸಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಇದುವರೆಗೆ ಒಂದು ಲಕ್ಷದ 24 ಸಾವಿರ ಬೀದಿ ಬದಿ ವ್ಯಾಪಾರಿಗಳ ನೊಂದಣಿಯಾಗಿದ್ದು, ಅವರಿಗೆ ಅರ್ಜಿ ನೀಡಿ ಭರ್ತಿ ಮಾಡಿಸಿ ಅಪ್ಲೋಡ್ ಮಾಡಬೇಕು ಹಾಗೂ ಬಿಟ್ಟು ಹೋಗಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಿ ಗುರುತಿನ ಚೀಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಸಾಲ ದೊರೆಯುವಂತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೆಲ್ವ ಕುಮಾರ್ ಅವರು ಸೂಚಿಸಿದರು.
ಕೆಲವೊಂದು ಜಿಲ್ಲೆಗಳಲ್ಲಿ ಶೂನ್ಯ ಅರ್ಜಿ ಸಲ್ಲಿಕೆಯಾಗಿದ್ದು, ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿಗಳೊಂದಿಗೆ ಸ್ವ ನಿಧಿ ಯೋಜನೆಯಲ್ಲಾಗಿರುವ ಪ್ರಗತಿ ಕುರಿತು ಚರ್ಚಿಸಿ ಅಭಿವೃದ್ಧಿ ಪಡಿಸುವಂತೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮತ್ತು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ನೊಂದಾಯಿಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜುಲೈ 1ರಿಂದ ಸ್ವ ನಿಧಿ ಯೋಜನೆಯು ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಯ ಪ್ರಗತಿ ತೋರಿಸುವಲ್ಲಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಮತ್ತು 10 ದಿನಕ್ಕೆ ಒಂದು ಬಾರಿ ಅಧಿಕಾರಿಗಳೊಂದಿಗೆ ಪುನರಾವಲೋಕನ ಮಾಡುವಂತೆ ಸೆಲ್ವ ಕುಮಾರ್ ಅವರು ಸೂಚಿಸಿದರು.
ವೀಡಿಯೋ ಸಂವಾದದ ನಂತರ ಜಿಲ್ಲಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಹಿಂದಿನ ಯೋಜನೆಯಾದ ಬಡವರ ಬಂಧು ಯೋಜನೆಯಲ್ಲಿ ಸಾಲ ಮನ್ನ ಮಾಡಿರುವ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿ ಸ್ವನಿಧಿ ಯೋಜನೆಯಡಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್, ಡೇನಲ್ಮ್‍ನ ಜಿಲ್ಲಾ ವ್ಯವಸ್ಥಾಪಕರಾದ ಡಾ. ರಾಜಶೇಖರ್ ಕನ್ನಾಳ್, ಜಿಲ್ಲಾ ಕೌಶಲ್ಯ ವ್ಯವಸ್ಥಾಪಕರಾದ ಕೋಮಲ ಜೆ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮುದಾಯ ಸಂಘಟಿಕರು ಹಾಗೂ ಇತರರು ಹಾಜರಿದ್ದರು.
Tags
ಹಾಸನ