ಜಿಲ್ಲೆಯಲ್ಲಿ ರೈತರಿಗೆ ಬೆಳೆ ವಿಮೆ ಸರಿಯಾಗಿ ತಲುಪುವಂತೆ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೆಳೆ ವಿಮೆ ಹಾಗೂ ಸರ್ಕಾರದ ಇತರ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ರೈತರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಮುಂಜಾಗ್ರತೆವಹಿಸಿ ಮತ್ತು ಮಳೆ ಹಾನಿಯಿಂದಾಗಿರುವ ನಷ್ಟಕ್ಕೆ ಸಕಾಲದಲ್ಲಿ ಪರಿಹಾರ ಒದಗಿಸಿ ಎಂದು ಅವರು ಸೂಚನೆ ನೀಡಿದರು.
ಆಲೂಗಡ್ಡೆ ಬಿತ್ತನೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ರೈತರಿಗೆ ಪರಿಹಾರ ಒದಗಿಸಿ ಮುಂದಿನ ದಿನಗಳಲ್ಲಿ ಆದಷ್ಟು ದೃಢೀಕೃತ ಬಿತ್ತನೆ ಬೀಜ ಪೂರೈಕೆಗೆ ಪ್ರಯತ್ನ ನಡೆಸಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರು ಹೇಳಿದರು.
ಬೆಳೆ ಸಮೀಕ್ಷೆ ಅತ್ಯಂತ ನಿಖರವಾಗಿ ನಡೆಯಬೇಕು ಯಾವುದೇ ರೈತರು ಇದರಿಂದ ಕೈಬಿಟ್ಟು ಹೋಗಬಾರದು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಕಾಲುಬಾಯಿ ಜ್ವರ ಸೇರಿದಂತೆ ವಿವಿಧ ರೋಗಗಳಿಗೆ ದನಕರುಗಳಿಗೆ ಸಕಾಲದಲ್ಲಿ ಲಸಿಕೆ ನೀಡಬೇಕು ಅದೇ ರೀತಿ ಮೇವು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಬಗ್ಗೆ ಗಮನ ಹರಿಸುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರು ಹಾಗೂ ತಂತ್ರಜ್ಞರು, ಸ್ಟಾಫ್ ನರ್ಸ್‍ಗಳ ಹುದ್ದೆಯನ್ನು ಶೀಘ್ರವಾಗಿ ಭರ್ತಿ ಮಾಡಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಊಟೋಪಚಾರ ನೀಡಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುತ್ತಿರುವ ಚಿಕಿತ್ಸೆ ಮತ್ತು ಪಡೆಯುತ್ತಿರುವ ಬಿಲ್‍ಗಳ ಬಗ್ಗೆಯೂ ನಿಗಾವಹಿಸಿ ಎಂದು ಶ್ವೇತಾ ದೇವರಾಜ್ ಅವರು ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಆಯುಷ್ ಇಲಾಖೆ ವತಿಯಿಂದ ಕಷಾಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಪೂರೈಸಿ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಂದ ಒದಗಿಸಲಾಗುವ ಸೌಲಭ್ಯಗಳು ಫಲಾನುಭವಿಗಳಿಗೆ ದೊರಕುವಂತೆ ಕ್ರಮ ವಹಿಸಬೇಕು ಎಂದರಲ್ಲದೆ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಯನ್ನು ಫಲಾನುಭವಿಗಳಿಗೆ ಆದಷ್ಟು ಬೇಗ ಕೊರೆಸಿಕೊಡಬೇಕು. ಯಾವುದೇ ಸೌಲಭ್ಯಗಳು ವಿಳಂಬವಾಗದಂತೆ ಫಲಾನುಭವಿಗಳಿಗೆ ಪೂರೈಕೆ ಮಾಡಬೇಕು ಎಂದು ಶ್ವೇತಾ ದೇವರಾಜ್ ಅವರು ತಿಳಿಸಿದರು.
ಪಡಿತರ ವಿತರಣೆ ಮೂಲಕ ನೀಡಲಾಗುವ ಆಹಾರ ಧಾನ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ. ಎಲ್ಲಾ ಫಲಾನುಭವಿಗಳಿಗೂ ಆಹಾರ ಧಾನ್ಯಗಳು ದೊರಕುವಂತೆ ನಿಗಾವಹಿಸಿ ಎಂದರು.
ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್‍ಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ವೀಕ್ಷಣೆಗೆ ತೊಂದರೆಯಾಗದಂತೆ ನಿರಂತರ ಜ್ಯೋತಿ ಸೌಲಭ್ಯ ಯಾವ ಯಾವ ಹಳ್ಳಿಗಳಲ್ಲಿ ಇಲ್ಲ ಎಂಬುದನ್ನು ಗುರುತಿಸಿ ವಿದ್ಯುತ್ ಸೌಲಭ್ಯ ಒದಗಿಸಿ . ಅಲ್ಲದೆ ಮಕ್ಕಳನ್ನು ಕೇವಲ ಪರೀಕ್ಷಾ ಉದ್ದೇಶಕ್ಕೆ ಸಿದ್ದ ಮಾಡದೇ ಒಟ್ಟಾರೆ ವ್ಯಕ್ತಿತ್ವ ವಿಕಾಸ ಹಾಗೂ ಬೌದ್ಧಿಕ ಗುಣಮಟ್ಟ ವೃದ್ಧಿಗೆ ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹೇಳಿದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಸಲು ಸಬ್ಸಿಡಿ ನೀಡಲಾಗುತ್ತಿದ್ದು, ಬ್ಯಾಂಕುಗಳಿಂದ ಸರಿಯಾದ ಸಹಕಾರ ದೊರೆಯುತ್ತಿಲ್ಲ ಎಂಬ ದೂರುಗಳಿವೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರಲ್ಲದೆ, ಐ.ಬಿ ಹಾಗೂ ಯಾತ್ರಿ ನಿವಾಸಗಳ ಸೂಕ್ತ ನಿರ್ವಹಣೆಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಸುಮಾರು 114 ಕಿ.ಮೀ ರಸ್ತೆ ಕಾಮಗಾರಿಯು 105 ಕೋಟಿ ರೂ. ವೆಚ್ಚದಲ್ಲಿ ಮಂಜೂರಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ಹಣ್ಣಿನ ಹಾಗೂ ಇತರ ಸಸಿಗಳನ್ನು ಬೆಳೆದು ರೈತರಿಗೆ ವಿತರಣೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ಮಾಡಿ ಪೂರೈಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಲಾಕ್‍ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ಹೂವು ಹಾಗೂ ಹಣ್ಣಿನ ಬೆಳೆಗಾರರೆಲ್ಲರಿಗೂ ಪರಿಹಾರ ದೊರೆಯಬೇಕು. ಯಾರೂ ಕೂಡ ಸೌಲಭ್ಯದಿಂದ ವಂಚಿತರಾಗದಂತೆ ಸಂಪೂರ್ಣ ಸಮೀಕ್ಷೆ ನಡೆಸಿ ಎಂದು ಅವರು ನಿರ್ದೇಶನ ನೀಡಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಇಳಿಮುಖವಾದಂತೆ ಕಂಡುಬರುತ್ತಿದ್ದು, ಈ ಸಾಲಿಗಾದರೂ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳನ್ನು ಪರೀಕ್ಷೆಗೆ ಸಿದ್ದಪಡಿಸಿ. ಅದಕ್ಕೆ ಪೂರಕ ಯೋಜನೆಗಳನ್ನು ರೂಪಿಸಿ ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಲ್ಲಾ ವೈದ್ಯರು ಉತ್ತಮವಾಗಿ ಕೆಲಸ ಮಾಡಿದ್ದೀರಿ ಅದಕ್ಕಾಗಿ ಅಭಿನಂದನೆಗಳು ಇದೊಂದು ಯುದ್ದರೀತಿಯ ಸಂದರ್ಭವಾಗಿದ್ದು, ಇರುವ ಮಾನವ ಸಂಪನ್ಮೂಲವನ್ನು ಬಳಸಿ ಗರಿಷ್ಠ ಸೇವೆ ಒದಗಿಸಿ ಅಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಹೇಳಿದರು.
ಕೋವಿಡ್ ಜೊತೆಗೆ ಇತರ ರೋಗಿಗಳಿಗೂ ಚಿಕಿತ್ಸೆ ನೀಡಿ ಎಲ್ಲಾ ಆಸ್ಪತ್ರೆಗಳಲ್ಲಿ ತಪಾಸಣೆ ಮತ್ತು ಇತರ ಸೌಲಭ್ಯಗಳನ್ನು ಮುಂದುವರೆಸಿ. ಪ್ರತಿ ತಾಲ್ಲೂಕಿಗೆ ಒಂದು ಸಂಚಾರಿ ಕೋವಿಡ್ ತಪಾಸಣಾ ವಾಹನವನ್ನು ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ಅವುಗಳನ್ನು ರದ್ದುಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ತಿಳಿಸಿದರು.
ಉಪಕಾರ್ಯದರ್ಶಿ ಎಸ್.ಸಿ ಮಹೇಶ್, ಆಡಳಿತ ಉಪ ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯ ಯೋಜನಾಧಿಕಾರಿ ನಾಗರಾಜು ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
Tags
ಹಾಸನ