ರಾಮನಾಥಪುರ ಪಟ್ಟಣದಿಂದ ಹಾದು ಹೋಗಿರುವ ಕಾವೇರಿ ನದಿಯಿಂದ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆಯಂತೆ ರಾಮನಾಥಪುರ ನೆರೆ ಹಾವಳಿ ಪ್ರದೇಶದ ಪರಿಶೀಲನೆಗೆ ಇಂದು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಾವೇರಿ ನದಿಯಿಂದ ಆಗಿರುವಂತಹ ಹಾನಿಯನ್ನು ಕಂಡಿದ್ದು ಮುಂದಿನ ಕೆಲ ದಿನಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪ್ರತಿವರ್ಷ ಮಳೆಯ ಅವಾಂತರ ಹೆಚ್ಚುತ್ತಿದ್ದು, ಸಕಲೇಶಪುರ ತಾಲ್ಲೂಕು, ಮಡಿಕೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸುತ್ತಿದೆ ಇದಕ್ಕೆ ಅರಣ್ಯನಾಶವು ಒಂದು ಕಾರಣವಾಗಿದೆ ಮೂರ್ನಾಲ್ಕು ತಿಂಗಳು ಬರಬೇಕಾದ ಮಳೆ ಎಂಟು ಹತ್ತು ದಿನದಲ್ಲಿ ಸುರಿಯುತ್ತಿರುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಹೇಳಿದರು.
ಜಿಲ್ಲೆಯ ಜಲಾಶಯಗಳ ಹಿನ್ನೀರಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಹೆಚ್ಚಿದೆ ಈ ಹಿನ್ನೆಲೆಯಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನಾಲೆಗಳ ಮೂಲಕ ಕೆರೆಕಟ್ಟೆ ತುಂಬಿಸಲು ನೀರನ್ನು ಹರಿ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವರು ಇದೇವೇಳೆ ತಿಳಿಸಿದರು.
ರಾಮನಾಥಪುರ ಪಟ್ಟಣಕ್ಕೆ ಕಾವೇರಿ ನೀರು ಉಕ್ಕಿ ಹರಿಯದಂತೆ ತಡೆಗೋಡೆ ನಿರ್ಮಾಣ ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸುವುದು ನಿಶ್ಚಿತ ಎಂದರಲ್ಲದೆ, ಸರ್ಕಾರ ಜನರ ಸಂಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಮಾಜಿ ಸಚಿವ ಎ.ಮಂಜು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
Tags
ಅರಕಲಗೂಡು