ಬಾಲ್ಯ ವಿವಾಹ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಿ: ಜಿಲ್ಲಾಧಿಕಾರಿ ಆರ್. ಗಿರೀಶ್

ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು ಇದನ್ನು ಪ್ರೋತ್ಸಾಹಿಸಿದಲ್ಲಿ ಅಂತಹವರ ವಿರುದ್ಧ ಎಫ್.ಐ.ಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಇದನ್ನು ಪ್ರೋತ್ಸಾಹಿಸುವ ಅಥವಾ ಒತ್ತಾಯಪೂರ್ವಕವಾಗಿ ಮದುವೆ ನಡೆಸುವ ಪೋಷಕರ ಮೇಲೆ ಹಾಗೂ ಒಂದು ವೇಳೆ ಹುಡುಗ ಪ್ರಾಪ್ತ ವಯಸ್ಸಿನವನಾಗಿದ್ದರೆ ಅವನ ಮೇಲೂ ಸಹ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 18 ಬಾಲ್ಯವಿವಾಹಗಳು ನಡೆದಿದ್ದು, ಕೆಲವುಗಳ ಮೇಲೆ ಇನ್ನೂ ಸಹ ದೂರು ದಾಖಲಾಗಿಲ್ಲ. ಕೂಡಲೇ ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.
 
 ಜಿಲ್ಲಾ ನಿರೂಪಣಾಧಿಕಾರಿ ಎ.ಟಿ ಮಲ್ಲೇಶ್ ಅವರು ಮಾತನಾಡಿ ಬಾಲ್ಯ ವಿವಾಹ ಜರುಗಿರುವ ಬಗ್ಗೆ ದೂರು ಬಂದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಸಹ ಕುಟುಂಬದವರಿಂದ ವಿವಾಹ ನಡೆದಿರುವ ಬಗ್ಗೆ ಯಾವುದೇ ದಾಖಲೆಗಳು ದೊರೆಯುವುದಿಲ್ಲ. ಅಲ್ಲದೇ ಸ್ಥಳೀಯರು ಕೂಡ ಯಾವದೇ ರೀತಿಯ ಸಹಕಾರ ನೀಡುವುದಿಲ್ಲ, ಈ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಿದೆ ಎಂದರು.
 
 ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.

 ಬಾಲ್ಯ ವಿವಾಹ ಮಾಡುವುದರಿಂದ ಹೆಣ್ಣು ಮಗುವಿನ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಮೇಲೆ ತಿವ್ರವಾದ ಪರಿಣಾಮ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಮದುವೆ ನಡೆಯುವ ಮುನ್ನವೇ ಕ್ರಮ ಕೈಗೊಂಡು ಅದನ್ನು ತಡೆಯುವುದು ಅತ್ಯಾವಶ್ಯಕ ಎಂದು ಜಿಲ್ಲಾಧಿಕಾರಿ ತಿಳಿಸಿದರು.
 
 ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್ ನಂದಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ದಿಲೀಪ್ ಕೆ.ಜಿ, ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಾಂತರಾಜು  ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Post a Comment

Previous Post Next Post