ಶೃಂಗೇರಿ: ಸುಸಜ್ಜಿತ ಆಸ್ಪತ್ರೆ ಇಲ್ಲದ ವಲಯ ನಿಧಾನವಾಗಿ ಚಲಿಸಿ. ನಿಮ್ಮ ಹಾಗೂ ಊರಿನ ಜನರ ಆರೋಗ್ಯದ ಹಿತದೃಷ್ಠಿಯಿಂದ ವಾಹನಗಳನ್ನ ನಿಧಾನವಾಗಿ ಚಲಿಸಬೇಕೆಂದು ತಮ್ಮಲ್ಲಿ ವಿನಂತಿ ಎಂಬ ಬೋರ್ಡ್ ಗಳು ತಾಲೂಕಿನ ವಿವಿಧ ಭಾಗಗಳಲ್ಲಿ ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಸುಸರ್ಜಿತ ಆಸ್ವತ್ರೆ ಬೇಕು ಎಂಬ ಚಳುವಳಿ ಇತ್ತಿಚೆಗೆ ಆರಂಭಗೊಂಡಿತ್ತು, ಹೋರಾಟಗಾರರು ಗ್ರಾಮಗಳಲ್ಲಿ ಈ ವಿಭಿನ್ನ ಬರಹದ ಬ್ಯಾನರ್ ಹಾಕುವುದರ ಮೂಲಕ ಹೋರಾಟ ಇನ್ನಷ್ಟು ವೇಗ ಪಡೆದುಕೊಂಡಿದೆ.
ಈ ವಿಭಿನ್ನ ಬ್ಯಾನರ್ ಕಂಡು ಸ್ಥಳೀಯರ ಜೊತೆ ಜಿಲ್ಲೆಗೆ ಬರೋ ಪ್ರವಾಸಿಗರು ಕೂಡ ಕುತೂಹಲ ಭರಿತರಾಗಿದ್ದಾರೆ. ಕಳೆದ ಒಂದು ವಾರದಿಂದ ಶೃಂಗೇರಿಯಲ್ಲಿ ಬ್ಯಾನರ್ ಸದ್ದು ಜೋರಾಗಿದ್ದು. ರಾಜ್ಯ ಮಟ್ಟದಲ್ಲಿ ಶೃಂಗೇರಿಯ ಬ್ಯಾನರ್ ಹವಾ ಇಟ್ಟಿದ್ದು ಈಗ ಇತಿಹಾಸ..!
ಬ್ಯಾನರ್ ಆಂದ್ರೆ ಶೃಂಗೇರಿ ಜನತೆ ಒಮ್ಮೆ ಬೆಚ್ಚಿ ಬೀಳುತ್ತಾರೆ. ಕಳೆದ ವಾರ ಶಂಕರಾಚಾರ್ಯರ ಪುತ್ಥಳಿ ಮೇಲೆ ಈದ್‍ಮಿಲಾದ್ ಹಬ್ಬದಲ್ಲಿ ಶುಭ ಕೋರುವ ಬ್ಯಾನರ್ ಹಾಕಿದ್ದರಿಂದ ಶೃಂಗೇರಿಯಲ್ಲಿ ವಾದ-ವಿವಾದ ಪ್ರತಿಭಟನೆಗಳೇ ನಡೆದಿದ್ದವು. ನೋಡ-ನೋಡುತ್ತಿದ್ದಂತೆ ಶೃಂಗೇರಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಬಿಜೆಪಿ- ಕಾಂಗ್ರೆಸ್ ಪಕ್ಷಗಳು ಬ್ಯಾನರ್ ವಿವಾದವನ್ನು ರಾಜಕೀಯ ಆಸ್ತ್ರವಾಗಿ ಮಾಡಿಕೊಳ್ಳಲು ಯತ್ನಿಸಿದ್ದವು.
ಶಾರದಾಂಭೆ ಮಡಿಲಲ್ಲಿ ಮತ್ತೆ ಬ್ಯಾನರ್ ಸದ್ದು ಮಾಡುತ್ತಿದೆ. ಇದು ಯಾವುದೇ ವಿವಾದವನ್ನು ಸೃಷ್ಟಿ ಮಾಡಲು ಈ ಭಾರಿ ಸದ್ದು ಮಾಡುತ್ತಿಲ್ಲ. ಬದಲಾಗಿ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ದ ಜನರಲ್ಲಿ ಅರಿವು ಮೂಡಿಸುವ ಹಾಗೂ ಶೃಂಗೇರಿ ಪಟ್ಟಣಕ್ಕೆ ಒಂದು ಸುಸಜ್ಜಿತವಾದ ಆಸ್ವತ್ರೆ ಬೇಕು ಎಂಬ ಕೂಗು ಇದೆ.
ಶೃಂಗೇರಿ ಪ್ರಸಿದ್ಧ-ಪುಣ್ಯ ಹಾಗೂ ಪ್ರವಾಸಿಗರ ತಾಣ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ, ಇಂತಹಾ ಪ್ರವಾಸಿ ತಾಣದಲ್ಲಿ ಬಡಜನರ ಗೋಳನ್ನ ಕೇಳುವವರಿಲ್ಲದಂತಾಗಿದೆ. ಸುಮಾರು 40-50 ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಶೃಂಗೇರಿಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಸಣ್ಣ-ಪುಟ್ಟ ಜ್ವರ-ಶೀಥದಂತಹಾ ಖಾಯಿಲೆ ಹೊರತುಪಡಿಸಿ ಇನ್ಯಾವುದೇ ಖಾಯಿಲೆ ಇದ್ದರೂ ವೈದ್ಯರ ಬಾಯಲ್ಲಿ ಬರೋದು ಮಾತು ಒಂದೇ. ಇಲ್ಲಿ ಆಗಲ್ಲ. ಮಣಿಪಾಲ್‍ಗೆ ಹೋಗಿ ಅನ್ನೋದು. ಇದರಿಂದ ಸ್ಥಳಿಯರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ಈಗಿರುವ ಆಸ್ಪತ್ರೆಯಲ್ಲಿ ಯಾವುದೇ ಸುಸಜ್ಜಿತ ವ್ಯವಸ್ಥೆಯಾಗಲಿ, ಸೌಲಭ್ಯವಾಗಲಿ ಇಲ್ಲ. ಎಲ್ಲಾ ವಿಭಾಗದಲ್ಲೂ ವೈದ್ಯರೂ ಇಲ್ಲ. ಮಣಿಪಾಲ್ ಅಥವ ಉಡುಪಿಗೆ ಶೃಂಗೇರಿಯಿಂದ ಸುಮಾರು 100 ಕಿ.ಮೀ. ಇದೆ. ಅದು ಕೂಡ ಘಾಟಿಯ ರಸ್ತೆ. ತುರ್ತು ಸಂದರ್ಭದಲ್ಲಿ ಅಲ್ಲಿಗೆ ಹೋಗಲು ಎರಡರಿಂದ ಮೂರು ಗಂಟೆ ಬೇಕು. ಅಷ್ಟು ದೂರ ಹೋಗುವಾಗ ಮಾರ್ಗ ಮಧ್ಯೆ ಏನು ಬೇಕಾದ್ರು ಸಂಭವಿಸಬಹುದು. ಈಗಾಗಲೇ ಮಾರ್ಗ ಮಧ್ಯೆ ಕೊನೆಯುಸಿರೆಳೆದಿರೋರು ಹಲವರಿದ್ದಾರೆ.
ಹಲವರು ಅಲ್ಲಿನ ಬಿಲ್ ನೋಡಿ ಜೀವ ಉಳಿದರು ಜೀವನವೇ ಹೋದಂತಾಗಿದೆ. ಸಾಲ ತೀರಿಸಲು ದುಡಿಯುತ್ತಲೇ ಇದ್ದಾರೆ. ಹಾಗಾಗಿ, ತಾಲೂಕಿನ ಜನ ತಾಲೂಕಿನ ಅಲ್ಲಲ್ಲೇ ಈ ರೀತಿಯ ಬ್ಯಾನರ್ ಬರೆಸಿ ಹಾಕಿದ್ದಾರೆ. ಕೂಡಲೇ ತಾಲೂಕಿಗೊಂಡು ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಆದರೇ, ಯುವಕ ತಂಡ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಯಾವುದೇ ರಾಜಕೀಯ ಪಕ್ಷಗಳು ಬೀದಿಗಿಳಿದು ಹೋರಾಟ ನಡೆಸುವ ಮನಸ್ಸು ಮಾಡಿಲ್ಲ.