ಸಕಲೇಶಪುರ: ಇಡೀ ಜಗತ್ತನ್ನು ಆತಂಕಕ್ಕೆ ಈಡುಮಾಡಿರುವ ಕೋವಿಡ್–19 ಸೋಂಕಿತರ ಆರೈಕೆಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯ್ಸ್ ಸೇವೆ ಶ್ಲಾಘನೀಯ ಎಂದು ಇಲ್ಲಿಯ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಕೆ. ಹರೀಶ್ ಹೇಳಿದರು.
ಸ್ಥಳೀಯ ರೋಟರಿ ಸಂಸ್ಥೆ ವತಿಯಿಂದ ಮೊಬೈಲ್ ಸ್ಕ್ವಾಡ್ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿದ ನಂತರ ಮಾತನಾಡಿದರು. ಕೊರೋನಾ ವಾರಿಯರ್ಸ್ ಕಳೆದ 6 ತಿಂಗಳಿಂದ ಒತ್ತಡ ಹಾಗೂ ಭಯದ ನೆರಳಿನಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಯಾರಿಗಾದರೂ ಸೋಂಕು ತಗುಲಿದೆ ಎಂದು ತಿಳಿದರೆ ನಾವುಗಳು ಅವರ ಹತ್ತಿರ ಹೋಗದೆ, ಮಾತನಾಡಿಸದೆ ದೂರಕ್ಕೆ ಹೋಗುತ್ತೇವೆ. ಆದರೆ ಇವರು ಸೋಂಕಿತರ ಮನೆಗೆ ತೆರಳಿ ಅವರನ್ನು ವಾಹನದಲ್ಲಿ ಕೋವಿಡ್ ಆಸ್ಪತ್ರೆಗೆ ಕಳಿಸುವುದು, ಸೋಂಕಿತರ ಮನೆಯವರನ್ನು ತಪಾಸಣೆ ಮಾಡುವುದು, ಅವರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಾರೆ. ಸೋಂಕಿನಿಂದ ಮೃತಪಟ್ಟರೆ ಅವರ ಪಾರ್ಥೀವ ಶರೀರವನ್ನು ಅಂತ್ಯ ಸಂಸ್ಕಾರ ಮಾಡುವ ಕೆಲಸವನ್ನೂ ಸಹ ಕೊರೋನಾ ವಾರಿಯರ್ಸ್ ಮಾಡುತ್ತಿದ್ದಾರೆ. ಇವರ ಸೇವೆ ಗುರುತಿಸಿ ತಮ್ಮ ಸಂಸ್ಥೆಯಿಂದ ಗೌರವಿಸಲು ಹೆಮ್ಮೆ ಎನ್ನಿಸುತ್ತಿದೆ ಎಂದರು.
ಆಲೇಬೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಎಚ್. ರಮೇಶ್, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಎಸ್.ಜಿ. ಶಿವಪ್ಪ, ಪೊಲೀಸ್ ಹೆಡ್ ಕಾನ್ಟೇಬಲ್ ಮೋಹನ್, ಎಪಿಎಂಸಿ ನೌಕರರಾದ ಕುಮಾರ್, ಮನೋಜ್, ಸ್ವಯಂ ಸೇವಕ ಶರತ್ ಇವರನ್ನು ಸನ್ಮಾನಿಸಲಾಯಿತು.
ಡಾ. ಮೋಹನ್‌ದಾಸ್‌ಶೆಟ್ಟಿ ರೋಟರಿ ಸಂಸ್ಥೆಯ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಕೆ.ಜಿ. ಚಂದ್ರಶೇಖರ್ ಹಾಗೂ ಇತರರು ಇದ್ದರು.
Tags
ಸಕಲೇಶಪುರ