ದೇಶದ ಆರ್ಥಿಕತೆಯಲ್ಲಿ ಕೈಗಾರಿಕೆಗಳ ಪಾತ್ರ ಪ್ರಮುಖವಾದದ್ದು: ಆರ್. ಗಿರೀಶ್



ನಮ್ಮ ದೇಶದ ಆರ್ಥಿಕತೆ ಪ್ರಗತಿಯಲ್ಲಿ ಕೈಗಾರಿಕೆಗಳ ಪಾತ್ರ ಬಹಳ ಪ್ರಮುಖವಾದದ್ದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
 ನಗರದ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದ ನಂದಗೋಕುಲ ಕನ್ವೆನ್‍ಷನ್ ಸೆಂಟರ್‍ನಲ್ಲಿ ಇಂದು ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶವನ್ನು ಆರ್ಥಿಕವಾಗಿ ಸದೃಢಪಡಿಸಲು ಉದ್ಯೋಗಾವಕಾಶ ಒದಗಿಸುವುದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಹೆಚ್ಚು ಉದ್ದಿಮೆಗಳನ್ನು ಸೃಷ್ಟಿಸುವುದರ ಜೊತೆಗೆ ಕೃಷಿ ಕ್ಷೇತ್ರವನ್ನೂ ಸಹ ಅಭಿವೃದ್ಧಿಪಡಿಸುವಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾದದ್ದು ಎಂದು ಅವರು ಹೇಳಿದರು.

 ದೇಶದಲ್ಲಿ ಕ್ಯಗಾರಿಕಾ ನೀತಿಯನ್ನು ಮೊದಲ ಬಾರಿ ಜಾರಿಗೆ ತಂದ ಹಿರಿಮೆ ಕರ್ನಾಟಕಕ್ಕೆ ಸೇರುತ್ತದೆ. ಕೈಗಾರಿಕೆಗಳ ಉನ್ನತೀಕರಣ ಹಾಗೂ ಅಭಿವೃದ್ಧಿಗೆ ಸರ್ಕಾರವು ನೂತನ ಕೈಗಾರಿಕಾ ನೀತಿ ಹಾಗೂ ಅಗತ್ಯ ಪ್ರೋತ್ಸಹಗಳನ್ನು, ಪಾಲಿಸಿಗಳನ್ನು ಜಾರಿಗೆ ತರುತ್ತಿದ್ದು, ಕೈಗಾರಿಕೆಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

 ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ, ಬೆಂಗಳೂರಿನಿಂದ ಮಂಗಳೂರಿನ ಹೆದ್ದಾರಿಯನ್ನು ಅಗಲೀಕರಣ ಮಾಡಲಾಗುತ್ತಿದ್ದು, ಇದರಿಂದ ಸರಕು ಸಾಗಾಣಿಕೆಗೆ ಅನುಕೂಲವಾಗಲಿದೆ ಎಂದರಲ್ಲದೆ, ಜಿಲ್ಲೆಯಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಅವರು ತಿಳಿಸಿದರು.

 ಕಾಸಿಯಾ ಅಧ್ಯಕ್ಷರಾದ ಕೆ.ಬಿ ಅರಸಪ್ಪ ಅವರು ಮಾತನಾಡಿ ಕೊರೋನ ಹಿನ್ನೆಲೆಯಲ್ಲಿ ಸೂಕ್ಷ್ಮ ಹಾಗೂ ಸಣ್ಣ ಉದ್ಯಮಗಳು ಬಹಳ ಕಷ್ಟದ ಹಂತವನ್ನು ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಉದ್ಯಮಗಳನ್ನು ಬೆಂಬಲಿಸಲು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಂಡಿರುವುದು ಸಂತೋಷದ ವಿಷಯ ಎಂದರು.

 ಹೀಗಿದ್ದರೂ ಸಹ ಕೈಗಾರಿಕಾ ವಲಯಕ್ಕೆ ರಸ್ತೆ, ಒಳಚರಂಡಿ ವ್ಯವಸ್ಥೆ, ಬೀದಿ ದೀಪಗಳು ಹಾಗೂ ಲಾರಿಗಳನ್ನು ನಿಲ್ಲಿಸಲು ಸ್ಥಳ ಇಂತಹ ಕೆಲವೊಂದು ಸೌಲಭ್ಯಗಳ ಅವಶ್ಯಕತೆ ಇದೆ. ಕೈಗಾರಿಕಾ ವಲಯಕ್ಕೆ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ, ಕೈಗಾರಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

 ನಗರದ ಕೈಗಾರಿಕಾ ವಲಯದಲ್ಲಿ ನೂತನವಾಗಿ ಅಹಾರ ಕೈಗಾರಿಕೆಗಳು, ಗೋದಾಮುಗಳು ಸೇರಿದಂತೆ ವಿವಿಧ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಲು ಸುಮಾರು 165 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಅರ್ಜಿ ಸಲ್ಲಿಸಿದ್ದು, ಆದಷ್ಟು ಬೇಗ ಅವರಿಗೆ ಜಾಗವನ್ನು ಮಂಜೂರು ಮಾಡಿಕೊಡಬೇಕು ಎಂದು ಅರಸಪ್ಪ ಅವರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

 ನಂತರ ಎಂ.ಎಸ್.ಎಂ.ಇ ನಿರ್ದೇಶನಾಲಯದ ಅಪರ ನಿರ್ದೇಶಕರು ಹಾಗೂ ಎಂ.ಎಸ್.ಇ.ಎಫ್.ಸಿ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎಂ ಶ್ರೀನಿವಾಸ್ ಅವರು ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಮಾಹಿತಿ ನೀಡಿದರು.
 
 ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಜಿ.ಓ ಮಹಾಂತಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದಿನೇಶ್, ಗೌರವ ಪ್ರಧಾನ ಕಾರ್ಯದರ್ಶಿ ಎನ್.ಆರ್ ಜಗದೀಶ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಅಧ್ಯಕ್ಷರಾದ ಹೆಚ್.ಆರ್ ಮದನ್ ಕುಮಾರ್, ಉಪಾಧ್ಯಕ್ಷರಾದ ಹೆಚ್.ಎ ಕಿರಣ್ ಹಾಗೂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post