ಅಭಿವೃದ್ಧಿ ಹಾದಿಯಲ್ಲಿ ಹಾಸನ ಮುಂಚೂಣಿಯಲ್ಲಿದೆ: ಕೆ.ಬಿ. ಅರಸಪ್ಪ


ಕೈಗಾರಿಕಾ ಮತ್ತು ಇತರ ಅಭಿವೃದ್ಧಿಯ ಎಲ್ಲಾ ಯೋಜನೆಗಳಲ್ಲಿ ಹಾಸನ ಯಾವಾಗಲೂ ಪ್ರಮುಖವಾಗಿ ಕಾಣಿಸಿಕೊಂಡಿದೆ. ಕೃಷಿ ಮತ್ತು ಪ್ರವಾಸೋದ್ಯಮದ ವಿಷಯದಲ್ಲಿ ಹಾಸನ ಅತ್ಯಂತ ಮಹತ್ವದ ಪಾತ್ರ ಹೊಂದಿದೆ. ಜಾಗತಿಕ ಖ್ಯಾತಿಯ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಜಿಲ್ಲೆಯು ಪ್ರವಾಸೋದ್ಯಮವನ್ನು ಇನ್ನಷ್ಟು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಿ ಜನಪ್ರಿಯಗೊಳಿಸುವುದು ಅಗತ್ಯವಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಕೆ.ಬಿ. ಅರಸಪ್ಪ ಅವರು ತಿಳಿಸಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಹಾಸನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಮಲೆನಾಡು ಪ್ರದೇಶಗಳ ಪ್ರವೇಶದ್ವಾರವೂ ಆಗಿದೆ. ಕೈಗಾರಿಕಾಭಿವೃದ್ಧಿಯ ವಿಷಯದಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟು ಭೂಮಿಯನ್ನು ಹೊಂದಿರುವ ನಿರ್ದಿಷ್ಟ ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.

ಉದ್ಯಮಗಳ ಸಂಘದೊಂದಿಗೆ ಸರ್ಕಾರ ಪಿ.ಪಿ.ಪಿ ಮಾದರಿಯಲ್ಲಿ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸುವುದನ್ನು ಗಮನಿಸಬಹುದು. ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳ ಜೊತೆಗೆ ವಿದ್ಯುತ್ ಸರಬರಾಜು, ರಸ್ತೆ ಸಂಪರ್ಕ, ವೇರ್ ಹೌಸಿಂಗ್, ಕೋಲ್ಡ್ ಸ್ಟೋರೇಜ್ ಮತ್ತು ಸಂಬಂಧಿತ ಸೌಲಭ್ಯಗಳ ವಿಷಯದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಅವಶ್ಯಕತೆಯಿದೆ ಹಾಗಾಗಿ ಸರ್ಕಾರ ಉತ್ತಮ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಹೇಳಿದರು.
 
ಜಿಲ್ಲೆಯಲ್ಲಿ 800 ಕೋಟಿ ರೂ.ಗಳ ಹೂಡಿಕೆಯೊಂದಿಗೆ 17,500 ಕ್ಕೂ ಹೆಚ್ಚು ಎಂ.ಎಸ್.ಎಂ.ಇ. ಘಟಕಗಳು ಕಾರ್ಯಾಚರಣೆ ನಡೆಸುತ್ತಿದ್ದು, 97,000ಕ್ಕೂ ಹೆಚ್ಚು ಉದ್ಯೋಗ ನೀಡುತ್ತಿದೆ. ಹಾಗೂ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಗಮನಾರ್ಹ ಉಪಸ್ಥಿತಿಯನ್ನು ಸಹ ಹೊಂದಿದೆ. ನವ ಮಂಗಳೂರು ಬಂದರು ಟ್ರಾಯನ್ಸಿಟ್ ಕೇಂದ್ರಕ್ಕೆ ನಿಕಟವಾಗಿ ನೆಲೆಗೊಂಡಿರುವ ಈ ಜಿಲ್ಲೆಯು ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಸಾಮಥ್ರ್ಯವನ್ನು ಹೊಂದಿದೆ ಎಂದು ಕೆ.ಬಿ. ಅರಸಪ್ಪ ಅವರು ಹೇಳಿದರು.

ಇತ್ತೀಚೆಗೆ ರಾಜ್ಯ ಸರ್ಕಾರವು ನೈರ್ಮಲ್ಯ ಉತ್ಪನ್ನಗಳ ಕ್ಲಸ್ಟರ್ ಅಭಿವೃದ್ಧಿಗಾಗಿ ಹಾಸನ ಜಿಲ್ಲೆಯನ್ನು ಗುರುತಿಸಿದೆ, ಈ ರಾಜ್ಯದಲ್ಲಿ ಯೋಜಿಸಲಾಗಿರುವ 9 ವಿವಿಧ ಕ್ಲಸ್ಟರ್‍ಗಳಲ್ಲಿ ಇದು ಒಂದಾಗಿದೆ. ಈಗಾಗಲೇ ಎಂಜಿನಿಯರಿಂಗ್, ಆಟೋಮೊಬೈಲ್, ಎಲೆಕ್ಟ್ರಿಕಲ್ ಮೆಷಿನರಿ, ಟೆಕ್ಸ್‍ಟೈಲ್ಸ್, ಫಾರ್ಮಾಸ್ಯುಟಿಕಲ್ಸ್, ಕಾಫಿ ಕ್ಯೂರಿಂಗ್, ಪೇಪರ್ ಮತ್ತು ಪೇಪರ್ ಉತ್ಪನ್ನಗಳಲ್ಲಿ ಉದ್ಯಮಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಕೆಲವು ಕೃಷಿ ಆಧಾರಿತ ಕೈಗಾರಿಕೆಗಳಿದ್ದು, ಕಾಫಿ ಮತ್ತು ಏಲಕ್ಕಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ರಫ್ತು ಮಾಡಲಾಗುತ್ತಿವೆ ಎಂದು ಅವರು ತಿಳಿಸಿದರು.

ಕೆ.ಐ.ಎ.ಡಿ.ಬಿ. ಮತ್ತು ಕೆ.ಎಸ್.ಎಸ್.ಐ.ಡಿ.ಸಿ. ಹಲವಾರು ಕೈಗಾರಿಕಾ ಪ್ರದೇಶಗಳು ವಸಾಹತುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಕೆ.ಐ.ಎ.ಡಿ.ಬಿ. ಮೂರು ಪ್ರದೇಶಗಳಲ್ಲಿ ಫಾರ್ಮಾಸ್ಯುಟಿಕಲ್ಸ್, ಟೆಕ್ಸ್‍ಟೈಲ್ಸ್ ಮತ್ತು ಹಾಡ್ರ್ವೇರ್ ಕಾರ್ಯಚಟುವಟಿಕೆಗಳ ಮೇಲೆ ಕೆ.ಎಸ್.ಎಸ್.ಐ.ಡಿ.ಸಿ. ಜಿಲ್ಲೆಯಾದ್ಯಂತ 7 ಕ್ಕೂ ಹೆಚ್ಚು ಕೈಗಾರಿಕಾ ವಸಾಹತುಗಳನ್ನು ಹೊಂದಿದೆ. ಹಾಗಾಗಿ ಕೈಗಾರಿಕೆಗಳಿಗೆ ಅಗತ್ಯವಾದ ಮೂಲಸೌಕರ್ಯಗಳ ಬ್ಯಾಕಪ್ ಮತ್ತು ಲಾಜಿಸ್ಟಿಕ್ಸ್ ಅನ್ನು ಒದಗಿಸುವ ಮೂಲಕ ಜಿಲ್ಲೆಯಲ್ಲಿ ಹೂಡಿಕೆದಾರರಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಕೆ.ಬಿ. ಅರಸಪ್ಪ ಅವರು ಮನವಿ ಮಾಡಿದರು.

ಬಿ.ಕಾಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ನಿವೇಶನಗಳು ಹೆಚ್ಚು ಕಡಿಮೆ ಸಂಪೂರ್ಣವಾಗಿ ಹಂಚಿಕೆಯಾಗಿವೆ ಹಾಗಾಗಿ ಕೆ.ಐ.ಎ.ಡಿ.ಬಿ ಹೊಸದಾಗಿ ಕೈಗಾರಿಕಾ ಬೆಳವಣಿಗೆ ಕೇಂದ್ರವನ್ನು ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು. 

ವಿದ್ಯುತ್ ಸರಬರಾಜಿನ ಅಡೆತಡೆಗಳು ಸಾಮಾನ್ಯವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಕಾರ್ಯಾಚರಣೆಗಳಿಗೆ ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಗುಣಮಟ್ಟದ ವಿದ್ಯುತ್ ಸರಬರಾಜಿನ ಅವಶ್ಯಕತೆ ಇದೆ ಹಾಗೂ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸುವ ಸಲುವಾಗಿ ಟ್ರಕ್ ಟರ್ಮಿನಲ್ ನಿರ್ಮಿಸಲು ಕ್ರಮವಹಿಸುವಂತೆ ಕೆ.ಬಿ. ಅರಸಪ್ಪ ಅವರು ತಿಳಿಸಿದರು.

ಹೊಸ ಕೈಗಾರಿಕಾ ನೀತಿಯು ಹೂಡಿಕೆಗಳನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಗಳನ್ನು ಹೊಂದಿದೆ. ಇದರಿಂದ ಜಿಲ್ಲೆಗಳಿಗೆ ಲಾಭವಾಗಬಹುದು. ಹಾಗಾಗಿ ಹಾಸನ ಮತ್ತು ಈ ಪ್ರದೇಶದ ಇತರ ಜಿಲ್ಲೆಗಳಲ್ಲಿನ ದೇಶೀಯ ಮತ್ತು ಅಂತರಾಷ್ಟ್ರೀಯ ಸರಕುಗಳ ಸಾಗಾಣಿಕೆಗಾಗಿ ಮಂಗಳೂರು ಬಂದರಿಗೆ ತ್ವರಿತ ಪ್ರವೇಶವನ್ನು ಹೊಂದಿವೆಯೆ ಎಂದು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಹೊಸ ಮಂಗಳೂರು ಬಂದರಿಗೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಕ್ರಮವಹಿಸುವಂತೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಕೆ.ಬಿ. ಅರಸಪ್ಪ ಅವರು ಮನವಿ ಮಾಡಿದರು. 

ಮಾನವ ಕುಲಕ್ಕೆ ನೈಜ ಪ್ರಾಮುಖ್ಯತೆಯ ಮತ್ತೊಂದು ಕ್ಷೇತ್ರವೆಂದರೆ ರೈಲುಗಳ ಚಲನೆಯ ವೇಗವನ್ನು ಹೆಚ್ಚಿಸುವ ಮೂಲಕ ಬೆಂಗಳೂರು ಮತ್ತು ಹಾಸನಗಳ ನಡುವಿನ ರೈಲು ಸಂಪರ್ಕವನ್ನು ಸುಧಾರಿಸಬೇಕು. ಈ ಕೈಗಾರಿಕಾ ಪ್ರದೇಶದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ರೈಲ್ವೆಯೊಂದಿಗೆ ಇದರ ಬಗ್ಗೆ ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ಇದು ಜಿಲ್ಲೆಯಲ್ಲಿ ಹೂಡಿಕೆಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು .ಬಿ. ಅರಸಪ್ಪ ಅವರು ತಿಳಿಸಿದರು.

ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಅಧ್ಯಕ್ಷರಾದ ಜಿ.ಒ. ಮಹಾಂತಪ್ಪ, ಗೌರವ ಪ್ರಧಾನ ಕಾರ್ಯದರ್ಶಿ ಎನ್.ಆರ್. ಜಗದೀಶ್, ಜಂಟಿ ಕಾರ್ಯದರ್ಶಿ ಜಯಕುಮಾರ್,  ಗ್ರಾಮೀಣ ಜಂಟಿ ಕಾರ್ಯದರ್ಶಿ ಚನ್ನಬಸಪ್ಪ ಸಿ. ಹೊಂಡದ ಕಟ್ಟಿ, ಖಜಾಂಚಿ ಎಸ್. ಶಂಕರನ್, ಗ್ರಾಮೀಣಾಭಿವೃದ್ಧಿ ಪ್ಯಾನಲ್ ಅಧ್ಯಕ್ಷರಾದ ಎಂ ಆರ್. ರಂಗಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.

Post a Comment

Previous Post Next Post