ಕರ್ನಾಟಕ ಲೋಕಸೇವಾ ಆಯೋಗವು ಇಲಾಖಾ ಪರೀಕ್ಷೆಗಳನ್ನು ಆ.17 ರಿಂದ ನಡೆಸುತ್ತಿದ್ದು, ಕೋವಿಡ್-19 ಪಾಸಿಟಿವ್ ಇರುವ ಅಭ್ಯರ್ಥಿಗಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಪರೀಕ್ಷಾ ಕೇಂದ್ರ ಸ್ಥಾಪಿಸಿ ಪರೀಕ್ಷೆ ನಡೆಸಲು ಕ್ರಮವಹಿಸುವಂತೆಕೆ.ಪಿ.ಎಸ್.ಸಿ. ಇಲಾಖಾ ಕಾರ್ಯದರ್ಶಿ ಸತ್ಯವತಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪರೀಕ್ಷೆಗಳ ಪೂರ್ವಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಸೋಂಕಿತ ಅಭ್ಯರ್ಥಿಗಳಿದ್ದರೆ, ಅವರನ್ನು ನೋಡಲ್ ಆಫೀಸರ್‍ಗಳು ಆಂಬ್ಯುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುವ ಕೆಲಸ ಮಾಡಬೇಕು ಎಂದರು.
ಪ್ರಶ್ನೆಪತ್ರಿಕೆ ಮತ್ತು ಒ.ಎಂ.ಆರ್ ಹಾಳೆಯನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಮೂರು ಜನ ರೂಟ್ ಆಫೀಸರ್‍ಗಳನ್ನು ಅಪರ ಜಿಲ್ಲಾಧಿಕಾರಿಯವರು ನೇಮಿಸಬೇಕು ಹಾಗೂ ನೋಡಲ್ ಅಧಿಕಾರಿಗಳಾಗಿರುವ ಡಯಟ್ ಪ್ರಾಂಶುಪಾಲರುಗಳು ಪರೀಕ್ಷಾ ಕೇಂದ್ರಗಳನ್ನು ನೋಡಿಕೊಳ್ಳುವಂತೆ ಕಾರ್ಯದರ್ಶಿ ಸತ್ಯವತಿ ಅವರು ತಿಳಿಸಿದರು.
ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಮೂಲ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಇಲ್ಲದಿದ್ದಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವಂತಿಲ್ಲ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಇನ್ವಿಜಿಲೇಟರ್‍ಗಳು ಅಭ್ಯರ್ಥಿಗಳಿಂದ ಒ.ಎಂ.ಆರ್ ಹಾಳೆಗಳನ್ನು ಪಡೆಯುವಾಗ ಲೆಕ್ಕಹಾಕಿ ಮತ್ತು ಪರಿಶೀಲಿಸಿ ಕಳುಹಿಸಿಕೊಡುವಂತೆ ಸೂಚಿಸಿದರಲ್ಲದೆ, ಅಭ್ಯರ್ಥಿಗಳು ಬಳಸಿದ ಒ.ಎಂ.ಆರ್. ಹಾಳೆಯನ್ನು ಮತ್ತು ಉಪಯೋಗಿಸದ ಹಾಳೆಗಳನ್ನು ಪ್ರತ್ಯೇಕ ಬಂಡಲ್‍ನಲ್ಲಿ ತಲುಪಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದು, ಪರೀಕ್ಷಾ ಕೇಂದ್ರಗಳ ಸ್ಥಳ ಮೇಲ್ವಿಚಾರಕರು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರವನ್ನು 10 ನಿಮಿಷ ಮುಂಚೆಯೇ ಮುಚ್ಚುವಂತೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ 2 ಗಂಟೆ ಮುಂಚೆಯೇ ಹಾಜರಿದ್ದು, ಕೊಠಡಿಗಳನ್ನು ತೆರೆದಿರುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸೇಷನ್ ಮಾಡಬೇಕು ಹಾಗೂ ಥರ್ಮಲ್ ಸ್ಕ್ಯಾನರ್, ಕೈಗವಸು ಮತ್ತು ಮಾಸ್ಕ್‍ಗಳನ್ನು ಕಡ್ಡಾಯವಾಗಿ ಬಳಸಿ ಪರೀಕ್ಷೆ ನಡೆಸಬೇಕು ಎಂದರಲ್ಲದೆ, ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಿ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಸತ್ಯವತಿ ಅವರು ನಿರ್ದೇಶಿಸಿದರು.
ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆಗಾಗಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿದ್ದು, ಅಧಿಕಾರಿಗಳಿಗೆ ಯಾವುದಾದರು ಗೊಂದಲಗಳಿದ್ದರೆ ಹಾಗೂ ತೊಂದರೆಗಳಿದ್ದರೆ ಸಹಾಯವಾಣಿ ಸಂಖ್ಯೆ: 22356487, 2226835 ಗೆ ಕರೆ ಮಾಡಿ ಪರಿಹಾರ ಪಡೆಯಬಹುದು ಎಂದು ಅವರು ಅಧಿಕಾರಿಗಳಿಗೆ ಹೇಳಿದರು.
ಬೆಳಿಗ್ಗೆ ಮತ್ತು ಮಧ್ಯಾಹ್ನದ ಪರೀಕ್ಷೆಗಳು ಮುಗಿದ ತಕ್ಷಣ ಒ.ಎಂ.ಆರ್. ಹಾಳೆಗಳನ್ನು ಪೋಸ್ಟ್ ಆಫೀಸ್‍ಗೆ ತಲುಪಿಸಬೇಕು. ಯಾವುದಾದರು ತೊಂದರೆಗಳಿದ್ದರೆ ಶೀಘ್ರವೇ ನಿಯಂತ್ರಣಾ ಕೊಠಡಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಕಾರ್ಯದರ್ಶಿ ಸತ್ಯವತಿ ಅವರು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಡಯಟ್ ಪ್ರಾಂಶುಪಾಲರಾದ ಪುಟ್ಟರಾಜು ಮತ್ತಿತರರು ಹಾಜರಿದ್ದರು.
Tags
ಹಾಸನ