ಸಾರ್ವಜನಿಕರ ಸೇವೆ ಮಾಡುವ ಅಧಿಕಾರಿಗಳಿಗೆ ಹಲವು ರೀತಿಯ ಒತ್ತಡಗಳು ಎದುರಾಗುತ್ತವೆ. ಆದರೆ ಅಧಿಕಾರಿಗಳು ಅವುಗಳಿಗೆ ಹೆದರದೆ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿಂದು ಪಿ.ಎಸ್.ಐ ಕಿರಣ್ ಕುಮಾರ್ ಅವರ ನಿಧನಕ್ಕೆ ಮೌನಾಚರಣೆ ಮಾಡಿದ ನಂತರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಕಿರಣ್ ಕುಮಾರ್ ಅವರ ಆತ್ಮಹತ್ಯೆಯು ವಿಷಾಧನೀಯ ಸಂಗತಿಯಾಗಿದ್ದು, ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಈ ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ಆತ್ಮಸ್ಥೈರ್ಯ ಹಾಗೂ ಪ್ರಾಮಾಣಿಕವಾಗಿ ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದರಲ್ಲದೆ, ಸರ್ಕಾರ ಹಾಗೂ ಜಿಲ್ಲಾಡಳಿತ ಸದಾ ಅಧಿಕಾರಿಗಳೊಂದಿಗೆ ಇರುತ್ತದೆ, ತಾವೂ ಸಹ ಯಾವುದೇ ಸಂದರ್ಬದಲ್ಲಿ ಅಧಿಕಾರಿಗಳಿಗೆ ಯಾವುದೇ ರೀತಿಯ ಒತ್ತಡವನ್ನು ಹೇರುವುದಿಲ್ಲ ಎಂದು ಅವರು ಹೇಳಿದರು.
ಕಿರಣ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿ ಬಂದಿದ್ದೇನೆ. 11 ನೇ ದಿನದ ಕಾರ್ಯದ ನಂತರ ಮತ್ತೊಮ್ಮೆ ಅವರ ಮನೆಗೆ ತೆರಳಿ ಮಾತನಾಡುತ್ತೇನೆ ಎಂದ ಸಚಿವರು, ಸರ್ಕಾರ ಹಾಗೂ ವೈಯಕ್ತಿಕವಾಗಿ ನೆರವು ಒದಗಿಸುವುದಾಗಿ ಹೇಳಿದರು.
ಶಾಸಕರಾದ ಪ್ರೀತಂ ಜೆ. ಗೌಡ ಅವರು ಮಾತನಾಡಿ ಸೇವೆ ಮಾಡುವಾಗ ಹಲವಾರು ರೀತಿಯ ಒತ್ತಡಗಳನ್ನು ಮೀರಿ ಕಾರ್ಯ ನಿರ್ವಹಿಸುವ ಸಾಮಥ್ರ್ಯ ಹಾಗೂ ಮನೋಬಲವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಅಂತಹ ಕೆಲವು ಸಂದರ್ಭಗಳು ಎದುರಾದಾಗ ಶಾಂತಚಿತ್ತರಾಗಿ ಅದನ್ನು ನಿಭಾಯಿಸುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ತಮ್ಮೊಂದಿಗೆ ಕುಟುಂಬವೂ ಇದೆಯೆಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸಂಸದರಾದ ಎಂ.ಎ ಗೋಪಾಲಸ್ವಾಮಿ ಅವರು ಮಾತನಾಡಿ ಕಿರಣ್ ಕುಮಾರ್ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದರು, ಅವರು ಅವಿರತವಾಗಿ, ಸಮಯದ ಮಿತಿಯಿಲ್ಲದೆ ಹಾಗೂ ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ಮಾಡುತ್ತಿದ್ದರು. ಅವರ ಅಕಾಲ ಮರಣದಿಂದ ಕುಟುಂಬದ ಮೇಲೆ ಭಾರಿ ಪರಿಣಾಮ ಬೀರಿದ್ದು, ಅವರ ಪತ್ನಿಗೆ ಸರ್ಕಾರಿ ಉದ್ಯೊಗವನ್ನು ನೀಡಿ ಕುಟುಂಬದ ಭವಿಷ್ಯಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಜಿಲ್ಲೆಯ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಿರುವುದು ಎಲ್ಲರಿಗೂ ವಿಷಾಧನೀಯ ಸಂಗತಿ. ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಣೆಯಲ್ಲಿ ಮನೋಬಲವನ್ನು ಕಳೆದುಕೊಳ್ಳಬಾರದು. ಜಿಲ್ಲಾಡಳಿತ ಸದಾ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರು ಜಿಲ್ಲೆಯ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ ಸಾಮಥ್ರ್ಯ, ವಾಹನಗಳು ಹಾಗೂ ವಸತಿ ಗೃಹಗಳ ಕೊರತೆ, ಜಿಲ್ಲೆಯಲ್ಲಿನ ಅಪರಾಧ ಹಾಗೂ ಅಪಘಾತ ಪ್ರಕರಣಗಳು, ಇಲಾಖೆ ವತಿಯಿಂದ ಕ್ರಮಗಳು, ಸುಧಾರಣಾ ಪ್ರಯತ್ನಗಳು, ಇಲಾಖಾ ಅಧಿಕಾರಿ ಸಿಬ್ಬಂದಿಗಳ ಮೇಲೆ ಇರುವ ಹೊಣೆಗಾರಿಕೆ, ಕೊರೋನಾ ಅವಧಿಯಲ್ಲಿ ಸೇವೆ ಮತ್ತಿತರ ವಿವರಗಳನ್ನು ಸಚಿವರಿಗೆ ನೀಡಿ ಅಗತ್ಯ ನೆರವು ಒದಗಿಸುವಂತೆ ಕೋರಿದರು.
ಅಪರಾಧ ನಿಯಂತ್ರಣಕ್ಕೆ ವಹಿಸಿರುವ ಮುಂಜಾಗ್ರತೆಗಳು, ಗಾಂಜಾ ಮಾರಾಟ, ಮರಳು, ಜೂಜು ದಂದೆಗಳ ಕಡಿವಾಣದ ಬಗ್ಗೆ ಅವರು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಉಪಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ,ಎನ್ ನಂದಿನಿ, ಉಪವಿಭಾಗಾಧಿಕಾರಿ ಡಾ|| ನವೀನ್ ಭಟ್, ಸಚಿವರ ಮುಖ್ಯ ಕಾರ್ಯದರ್ಶಿ ಕಾಂತರಾಜು, ಡಿ.ವೈ.ಎಸ್.ಪಿ ಪುಟ್ಟಸ್ವಾಮಿಗೌಡ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು
Tags
ಹಾಸನ