ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದು ನಿಜ: ಜೆಡಿಎಸ್ ರಾಜ್ಯಾಧ್ಯಕ್ಷ

ಹಾಸನ: ಶಾಸಕ ಜಮೀರ್ ಅಹ್ಮದ್ ಜೊತೆ ಶ್ರೀಲಂಕಾಕ್ಕೆ ಹೋಗಿದ್ದು ನಿಜ. ಆದರೆ ನಾವು ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದ ಸಮಯದಲ್ಲಿ ನಾನೂ ಶಾಸಕನಾಗಿದ್ದೆ. ಆದರೆ ನಾವ್ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ. ನಾವು ಶ್ರೀಲಂಕಾದಲ್ಲಿ ಇದ್ದಿದ್ದು ಎರಡೇ ದಿನ. ಅಲ್ಲಿ ಉಳಿದುಕೊಂಡಿದ್ದು ಒಂದೇ ರಾತ್ರಿ. ಸಾಮಾನ್ಯ ಹೋಟೆಲ್‍ನಲ್ಲಿ ಉಳಿದುಕೊಂಡು ವಾಪಸ್ಸಾಗಿದ್ದೇವೆ ಎಂದು ಜಮೀರ್ ಹೇಳಿಕೆಗೆ ತಿರುಗೇಟು ನೀಡಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 650 ಕೋಟಿ ರೂ. ಹಣ ಮಂಜೂರು ಮಾಡಿದ್ದರು. ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ನಿಗದಿಯಾದ ಹಣ ಕೂಡ ಬಿಡುಗಡೆಯಾಗಿಲ್ಲ. ಅದನ್ನು ಕೇಳಲು ಹೋಗಿದ್ದರು. ಇದನ್ನು ಬಿಟ್ಟು ಭೇಟಿ ಹಿಂದೆ ಬೇರೆ ಯಾವ ರಾಜಕೀಯವೂ ಇಲ್ಲ, ಬೇರೆ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Post a Comment

Previous Post Next Post