ಯುವ ಉದ್ಯಮಿಗಳಿಗೆ ಬ್ಯಾಂಕಿನಿಂದ ಸಹಕಾರ ದೊರೆಯಬೇಕು: ಆರ್. ಗಿರಿಶ್

ನೂತನವಾಗಿ ಉಧ್ಯಮವನ್ನು ಪ್ರಾರಂಭಿಸುವ ಯುವಕರಿಗೆ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು ಅತ್ಯಾವಶ್ಯಕವಾಗಿದ್ದು, ಬ್ಯಾಂಕುಗಳು ಈ ನಿಟ್ಟಿನಲ್ಲಿ ಹೆಚ್ಚಿನ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿವಧ ಬ್ಯಾಂಕುಗಳ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದರೂ ಸಹ, ಫಲಾನುಭವಿಗಳು ಅದನ್ನು ಪಡೆಯಲು ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ. ಬದಲಾಗಿ ವಿವಿಧ ಕಾರಣಗಳನ್ನು ತೋರಿಸಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿವೆ. ಇದರಿಂದ ಯುವಜನೆತೆಯ ಉತ್ಸಾಹ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ವಿವಧ ಬ್ಯಾಂಕಿನವರು ಫಲಾನುಭವಿಗಳ ದಾಖಲಾತಿಗಳು ಸರಿಯಾಗಿದ್ದಲ್ಲಿ ಅವರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಟಿ. ದಿನೇಶ್ ಅವರು ಮಾತನಾಡಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕಿದೆ. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದರು.
ಜಿಲ್ಲೆಯು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ಹೊಂದಿದ್ದರೂ ಸಹ, ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಇರುವುದಿಲ್ಲ. ಹಾಗಾಗಿ  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸ್ಥಾಪಿಸುವವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದು ಹೇಳಿದರು.
ಪ್ರತಿ ವರ್ಷ ಸುಮಾರು 9 ಸಾವಿರಕ್ಕೂ ಅಧಿಕ ಪದವೀಧರರು ಉದ್ಯೋಗ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಅವರಲ್ಲಿ ಕೇವಲ 2,500 ಪದವೀಧರರಿಗೆ ಮಾತ್ರ ಸ್ವಂತ ಉದ್ಯಮ ಅಥವಾ ವೇತನ ಉದ್ಯೋಗ ದೊರೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಬ್ಯಾಂಕುಗಳು ಹೊಸ ಉದ್ಯಮದಾರರಿಗೆ ಸರಿಯಾದ ಆರ್ಥಿಕ ಸಹಕಾರ ನೀಡದಿರುವುದು ಎಂದರು.
ಈ ಕಾರಣದಿಂದಲೇ ಯುವಜನತೆ ಹೊರರಾಜ್ಯಗಳಿಗೆ ಹೋಗಿ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಹಾಗಾಗಿ ಬ್ಯಾಂಕಿನವರು ವಿನಾ ಕಾರಣ ವಿವಿಧ ಅರ್ಹತೆಗಳನ್ನು ಯುವಜನರ ಮುಂದೆ ಒಡ್ಡದೆ, ಕೇವಲ ದಾಖಲಾತಿಗಳನ್ನು ಪರಿಗಣಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಇತರೆ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿವಿಧ ಪ್ರಮುಖ ಬ್ಯಾಂಕುಗಳ ಪ್ರದೇಶಿಕ ಅಧಿಕಾರಿಗಳು ಹಾಗೂ ವ್ವಸ್ಥಾಪಕರುಗಳು ಹಾಜರಿದ್ದರು.

Post a Comment

Previous Post Next Post