ಕಾಡು ಪ್ರಣಿಗಳ ಪ್ರಾಣಕ್ಕೆ ಬೆಲೆ ಇಲ್ಲ ಇದು ಅರಣ್ಯ ಇಲಾಖೆಯ ಸಿಬ್ಬಂದಿಯ ಬೇಜವಾಬ್ದಾರಿ

ಒಬ್ಬ ಮನುಷ್ಯ ದುರ್ಮರಣವಾದರೆ ಜನಪ್ರತಿನಿಧಿಗಳು ಓಡೋಡಿ ಬರುತ್ತಾರೆ ಸಾಂತ್ವಾನ ಹೇಳಲು, ಲಕ್ಷಗಟ್ಟಲೆ ಪರಿಹಾರ ನೀಡಲು ಮಂತ್ರಿಗಳು ವಾಹಿನಿಗಳಲ್ಲಿ ಸಂದರ್ಶನ ನೀಡುತ್ತಾರೆ.

ಆದರೆ ಕುಕ್ಕೆ ಸುಬ್ರಹ್ಮಣ್ಯದ ಹತ್ತಿರ ಒಂದು ಕಾಡಾನೆ ಕಾಡಲ್ಲಿ ಆಹಾರಕ್ಕಾಗಿ ತನ್ನ ಇಷ್ಟದ ಈಚಲು ಮರಕ್ಕೆ ಸೊಂಡಿಲು ಹಾಕುವಾಗ ವಿದ್ಯುತ್ ತಂತಿ ಸ್ಪರ್ಷಿಸಿ ಸಾವನ್ನಪ್ಪಿದೆ ಎಂದರೆ ವಿದ್ಯುತ್ ಇಲಾಖೆ ಹಾಗೂ ಅವರಿಗೆ ಅನುಮತಿ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿಯ ಬೇಜವಾಬ್ದಾರಿ ಎಷ್ಟಿರಬಹುದು. ಯಾವ ಜನ ಪ್ರತಿನಿಧಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಯಾವ ಪರಿಹಾರವೂ ಇಲ್ಲ.

ಪಾಪ ಆನೆಯ ಗುಂಪಿನವರು ಅದೆಷ್ಟು ಕಣ್ಣೀರಿಡಬಹುದು. ಹೌದು ಆನೆಗಳು ಮನುಷ್ಯನ ರೀತಿ ಭಾವನಾತ್ಮಕ ಜೀವಿ. ಒಂಟಿ ಸಲಗ ಬಿಟ್ಟು ಉಳಿದ ಆನೆಗಳು ಗುಂಪಾಗಿ ಜೀವನ ನಡೆಸುತ್ತದೆ. ಸಣ್ಣ ಮಕ್ಕಳನ್ನು ನಮಗೆ ಹೇಗೆ ಇಷ್ಟವೋ ಹಾಗೆ ಆನೆಯ ಹಿಂಡಿಗೆ ಮರಿ ಆನೆಗಳು ಕೇಂದ್ರ ಬಿಂದು. ವಲಸೆ ಹೋಗುವಾಗ, ಬೇರೆ ಪ್ರಾಣಿಗಳ ಆಕ್ರಮಣ ಮಾಡುವಾಗ ಮರಿ ಆನೆಯನ್ನು ಆನೆಗಳ ಹಿಂಡಿನ ಮಧ್ಯದಲ್ಲಿ ಇರುವಂತೆ ಮಾಡಿ ರಕ್ಷಿಸುತ್ತಾರೆ‌. ಅದೆಷ್ಟೋ ವೀಡಿಯೋ ನೋಡಿರಬಹುದು ಕಂದಕ, ಕೆಸರಲ್ಲಿ ಸಿಕ್ಕಿ ಹಾಕಿದ ಮರಿ ಆನೆಯನ್ನು ಇತರ ಆನೆಗಳು ಸೇರಿ ಕಾಪಾಡುವ ದೃಶ್ಯಗಳು. ಇದಲ್ಲದೇ ಆನೆ ಮರಣ ಹೊಂದಿದಾಗ ಇತರೆ ಅನೆಗಳು ಕಣ್ಣೀರಿಟ್ಟು ಸಂತಾಪ ಸೂಚಿಸುತ್ತವೆ ಎಂಬ ಬಗ್ಗೆ ವಿಜ್ಞಾನಿಗಳು ಹೇಳಿದ್ದಾರೆ.

ಮನುಷ್ಯನಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಕಾಳಜಿ ಈ ಮೂಕ ಪ್ರಾಣಿಗಳ ಜೀವದ ಮೇಲೆ, ಅವರು ಜೀವಿಸುವ ಕಾಡಿನ ಮೇಲಿರಬೇಕು. ಮನುಷ್ಯನಿಗೆ ಸಮನಾದ ಜೀವಿಸುವ ಹಕ್ಕು ಈ ಮೂಕ ಪ್ರಾಣಿಗಳಗೆ ನೀಡೋಣ.

ಕಾಡಿನ ಒಳಗಾಗಿ ಹೋಗುವ ವಿದ್ಯುತ್ ತಂತಿಯನ್ನು ಪ್ರಾಣಿ ಪಕ್ಷಿಗಳು ಸ್ಪರ್ಷಿಸದಂತೆ ಬಾಕ್ಸ ಮಾದರಿಯಲ್ಲಿ ತಂತಿಯನ್ನು ಮುಚ್ಚಿಟ್ಟರೆ ಇಂತಹ ದುರ್ಘಟನೆಯನ್ನು ತಪ್ಪಿಸಬಹುದು. ಈಗಿರುವ ಕಾಡೊಳಗಿನ ತಂತಿಗಳಿಗೆ ಕವಚ ಹಾಕುವ ಕೆಲಸವಾಗಬೇಕು.

Post a Comment

Previous Post Next Post