ಹಾಸನ : ಕರೊನಾ ಲಾಕ್‌ಡೌನ್‌ನಿಂದ ಗ್ರಂಥಾಲಯಗಳು ಬಾಗಿಲು ಹಾಕಿದ್ದರ ಪರಿಣಾಮ ಓದುಗರನ್ನು ಸೆಳೆಯಲು ಅನುಷ್ಠಾನಗೊಳಿಸಿರುವ ಇ-ಗ್ರಂಥಾಲಯಕ್ಕೆ ಬೇಡಿಕೆ ಹೆಚ್ಚಿದೆ. ಮಾರ್ಚ್‌ನಲ್ಲಿ ಆರಂಭಿಸಲಾದ ಕರ್ನಾಟಕ ಡಿಜಿಟಲ್ ಲೈಬ ರಾಜ್ಯಾದ್ಯಂತ 5,76,893 ಜನರು ಲಾಗಿನ್ ಆಗಿದ್ದಾರೆ. ಹಾಸನ ಜಿಲ್ಲೆಯ 11,215 ಜನರು ಮೊಬೈಲ್ ಮೂಲಕ ಇ-ಲೈಬ್ರರಿಗೆ ಸೇರ್ಪಡೆಯಾಗಿದ್ದು ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿ ಪುಸ್ತಕಗಳನ್ನು ಓದಲಷ್ಟೇ ಅವಕಾಶವಿದ್ದು, ಡೌನ್ ಲೋಡ್ ವ್ಯವಸ್ಥೆ ಕಲ್ಪಿಸಿಲ್ಲ, 38,024 ವಿವಿಧ ಬಗೆಯ ಪುಸ್ತಕ, 5,820 ವಿಡಿಯೋ, 5,990 ಇ-ಜರ್ನಲ್, ಮಕ್ಕಳಿಗೆ ಸಂಬಂಧಿಸಿದ 5,487 ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿದೆ.
ರಾಜ್ಯಕ್ಕೆ ಕೊರೊನಾ ವೈರಸ್ ಕಾಲಿಡುವುದಕ್ಕೂ ಮುನ್ನ ನಗರದ ಕೇಂದ್ರ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದಲು ನಿತ್ಯ 250 ರಿಂದ 300 ಜನರು ಬರುತ್ತಿದ್ದರು. ಸದಾಕಾಲ ಪುಸ್ತಕ ಪ್ರೇಮಿಗಳಿಂದ ತುಂಬಿರುತ್ತಿದ್ದ ಗ್ರಂಥಾಲಯವನ್ನು ಕರೊನಾ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿತ್ತು. ಆದ್ದರಿಂದ ಓದುಗರು ಮನೆಯಲ್ಲಿಯೇ ಕುಳಿತು ಇ-ಗ್ರಂಥಾಲಯದ ಮೂಲಕ ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದಾರೆ.
ಓದುಗರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಿರುವುದರಿಂದ ಲಾಕ್‌ಡೌನ್ ಅವಧಿಯಲ್ಲಿ ಪುಸ್ತಕ ಪ್ರೇಮಿಗಳು ಡಿಜಿಟಲ್ ಗ್ರಂಥಾಲಯದ ಮೊರೆ ಹೋಗಿದ್ದಾರೆ. ಇ- ಆವೃತ್ತಿಯಲ್ಲಿನ ಪುಸ್ತಕಗಳ ಪೈಕಿ ಸ್ಪರ್ಧಾತ್ಮಕ ಪರೀಕ್ಷೆ, ಕನ್ನಡ ಕೈಪಿಡಿ, ಇತಿಹಾಸ, ಭೂಗೋಳ, ಸಾಹಿತ್ಯ, ಕಲೆ, ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನಕ್ಕೆ ಸಂಬಂಧಿಸಿದ ಪುಸ್ತಗಳನ್ನು ಹೆಚ್ಚು ಜನರು ಓದುತ್ತಿದ್ದಾರೆ.
ಇ-ಗ್ರಂಥಾಲಯ ನೋಂದಣಿ ಹೇಗೆ?
ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಪುಸ್ತಕಗಳನ್ನು ಓದಲು ತಮ್ಮ ಮೊಬೈಲ್ ನಲ್ಲಿ ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ ಹಾಗೂ ಇ -ಸಾರ್ವಜನಿಕ ಗ್ರಂಥಾಲಯ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ನೋಂದಣಿ ಮೇಲೆ ಕ್ಲಿಕ್ ಮಾಡಿ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಬಳಿಕ ಮೊಬೈಲ್‌ಗೆ ಒಟಿಪಿ ಬರುತ್ತದೆ. ಒಟಿಪಿ ಸಂಖ್ಯೆ ನಮೂದಿಸಿದರೆ ತಮ್ಮ ಹೆಸರು ಇ- ಗ್ರಂಥಾಲಯದಲ್ಲಿ ನೋಂದಣಿಯಾಗುತ್ತದೆ. ಒಮ್ಮೆ ನೋಂದಣಿಯಾದರೆ ಸದಸ್ಯತ್ವ ಶಾಶ್ವತವಾಗಿರುತ್ತದೆ. ನೋಂದಣಿಯಾದ ಮೊಬೈಲ್ ಸಂಖ್ಯೆ ಹಾಗೂ ಪಾಸ್‌ವರ್ಡ್ ನಮೂದಿಸಿದರೆ ಇ ಸಾರ್ವಜನಿಕ ಗ್ರಂಥಾಲಯದಲ್ಲಿ ಲಾಗಿನ್ ಆಗಿ ಇಷ್ಟದ ಪುಸ್ತಕಗಳನ್ನು ಓದಬಹುದು. ನೋಂದಣಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದೆ.
ಗ್ರಂಥಾಲಯ ಪುನರಾರಂಭ: ಕರೊನಾ ಭೀತಿಯಿಂದ ಬಂದ್ ಆಗಿದ್ದ ಗ್ರಂಥಾಲಯಗಳು ಪುನರಾರಂಭವಾಗಿವೆ. ಗ್ರಂಥಾಲಯಕ್ಕೆ ಭೇಟಿ ನೀಡುವ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ಪರಸ್ಪರ ಅಂತರಕ್ಕೆ ಆದ್ಯತೆ ನೀಡಿದ್ದು, ಸಾರ್ವಜನಿಕರು ಅದನ್ನು ಪಾಲಿಸುತ್ತಿದ್ದಾರೆ. ಗ್ರಂಥಾಲಯದ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಥರ್ಮಲ್ ಸ್ಟೀನಿಂಗ್ ನಡೆಸಿ ಒಳಗೆ ಬಿಡುತ್ತಾರೆ.
Tags
ಹಾಸನ