ವಿದ್ಯುತ್ ಸಂಪರ್ಕ ಕಡಿತಗೊಂಡು ಗಂಟೆಗಳೇ ಕಳೆದರೂ ಬಾರದ ಬೆಳಕು

ಹಾಸನ:ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಗಂಟೆಗಳೇ ಕಳೆದರೂ ಬಾರದ ಬೆಳಕು, ಗ್ರಾಹಕರ ಸಹಾಯಕ್ಕೆಂದು ತೆರೆದ ತುರ್ತು ಸೇವೆ ಸಹಾಯವಾಣಿಯೂ ಕೋಮಾ ಸ್ಥಿತಿಯಲ್ಲಿ, ಇಡೀ ನಗರಕ್ಕೆ ಸೆಸ್ಕ್‍ನಿಂದ ಇರೋದು ಒಂದೇ ಗಾಡಿ, ಸಿಂಗಲ್ ಡ್ರೈವರ್ !
ಹಾಸನ ನಗರದಲ್ಲಿನ ಸೆಸ್ಕ್ ಪರಿಸ್ಥಿತಿ ಇದು. ನಗರ ವ್ಯಾಪ್ತಿಯ ಒಟ್ಟು 26.5ಕಿಮೀ. ವಿಸ್ತೀರ್ಣದ ಪ್ರದೇಶದಲ್ಲಿ ಸೆಸ್ಕ್ ಸೇವೆಯಲ್ಲಿ ವ್ಯತ್ಯಯವಾದರೆ ಗ್ರಾಹಕರಿಗೆ ತ್ವರಿತ ಸೇವೆ ಒದಗಿಸಲೆಂದು ಸ್ಥಾಪಿಸಿರುವ 9448994992 ಸಂಚಾರಿ ಸೇವಾ ವ್ಯವಸ್ಥೆ ಇದ್ದೂ ಇಲ್ಲದಂತಾಗಿದೆ.
ಎಲ್ಲಿಯೇ ಕಂಬದಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿದೆ, ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲಿನಲ್ಲಿ ಮುಳುಗಿವೆ, ಬೆಂಕಿ ಹೊತ್ತಿಕೊಳ್ಳುವ ಅಪಾಯ ಎದುರಾಗಿದೆ ಎಂದು ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿದರೆ ಕಡೇ ಪಕ್ಷ ತಕ್ಷಣವೇ ಕರೆಯನ್ನೂ ಸ್ವೀಕರಿಸುವುದಿಲ್ಲ. ಹತ್ತಾರು ಬಾರಿ ಕರೆ ಮಾಡಿದ ನಂತರವಷ್ಟೇ ಕರೆ ರಿಸೀವ್ ಮಾಡುವ ವ್ಯಕ್ತಿಗೆ ಕಂಬ ಹಾಗೂ ಮನೆಯ ಮೀಟರ್ ಸಂಖ್ಯೆಯನ್ನು ಎರಡೆರಡು ಬಾರಿ ಹೇಳಿ ದೂರು ನೋಂದಣಿ ಮಾಡಿಸಬೇಕು.
ಕರೆ ಮಾಡಿದವರು ಎಷ್ಟೇ ತುರ್ತು ಪರಿಸ್ಥಿತಿ ಎಂದು ಹೇಳಿದರೂ ಅತ್ತಲಿಂದ ಆಯ್ತು ಬರ್ತಿವಿ ಎನ್ನುವ ಒಂದು ಸಾಲಿನ ಉತ್ತರ ಮಾತ್ರವೇ ಸಿದ್ಧವಿರುತ್ತದೆ. ದೂರು ದಾಖಲಿಸಿ ಗಂಟೆಗಳು ಕಳೆದರೂ ತುರ್ತು ಸಹಾಯವಾಣಿಯಿಂದ ಸಹಾಯ ಬರುವುದೇ ಇಲ್ಲ. ಪುನಃ ನಾಲ್ಕಾರು ಬಾರಿ ಕರೆ ಮಾಡಿದರೆ ರಿಸೀವ್ ಮಾಡುವ ವ್ಯಕ್ತಿ ಮತ್ತೊಮ್ಮೆ ಕಂಬ, ಮೀಟರ್ ನಂಬರ್ ಹೇಳಿ ಎನ್ನುವ ಪ್ರತಿಕ್ರಿಯೆ ನೀಡುತ್ತಾರೆ. ಇಷ್ಟಾಗಿಯೂ ಲೈನ್‍ಮನ್ ಊಟ ಮಾಡಿ ಬರುತ್ತಾರೆ. ಕಾಫಿ ಕುಡಿಯುತ್ತಿದ್ದಾರೆ ಎನ್ನುವ ಸಮಜಾಯಿಷಿಯೊಂದಿಗೆ ಇನ್ನೊಂದು ಗಂಟೆಯಲ್ಲಿ ಬರ್ತಾರೆ ಎನ್ನುವ ಉತ್ತರ ದೊರೆಯುತ್ತದೆ. ಇದು ಸೆಸ್ಕ್ ಸಹಾಯವಾಣಿಗೆ ಕರೆ ಮಾಡುವ ಬಹುತೇಕರ ಅನುಭವವಾಗಿದೆ.
ಸುಮಾರು 30 ಸಾವಿರ ವಿದ್ಯುತ್ ಸಂಪರ್ಕಗಳನ್ನು ಹೊಂದಿರುವ ನಗರ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಕೇವಲ ನಾಲ್ವರು ಪವರ್‍ಮನ್, ಒಂದು ಮಾರುತಿ ಓಮ್ನಿ ವ್ಯಾನ್ ಸೌಲಭ್ಯ ನೀಡಲಾಗಿದೆ.
ಇದರಿಂದಾಗಿ ನಗರದ ಒಂದು ಭಾಗದಲ್ಲಿ ಸಾರ್ವಜನಿಕರು ವಿದ್ಯುತ್ ಕಡಿತದಂತಹ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದೂರು ದಾಖಲಿಸಿದರೆ, ಬೇರೊಂದು ಕಡೆಯಲ್ಲಿ ಸಮಸ್ಯೆ ಸರಿಪಡಿಸುತ್ತಿರುವ ಸಹಾಯವಾಣಿ ಸಿಬ್ಬಂದಿ ತಕ್ಷಣಕ್ಕೆ ಗ್ರಾಹಕರ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಹೋಗುವುದು ಸಾಧ್ಯವೇ ಇಲ್ಲ. ಕೆಲವೊಮ್ಮೆ ಗಾಳಿ, ಮಳೆಗೆ ವಿದ್ಯುತ್ ತಂತಿಗಳು ಪರಸ್ಪರ ತಾಕಿ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂದು ಜನರು ಭೀತಿಯಿಂದ ಕರೆ ಮಾಡಿದರೂ ಗಂಟೆಗಳವರೆಗೆ ಸಹಾಯ ಅವರನ್ನು ತಲುಪುವುದೇ ಇಲ್ಲ.
'ಮಳೆ, ಗಾಳಿ ಹೆಚ್ಚಾದ ಸಮಯದಲ್ಲಿ ಮಾತ್ರವೇ ಜನರಿಂದ ದೂರು ಬರುತ್ತದೆ. ಬಾಕಿ ಸಮಯದಲ್ಲಿ ಅವರಿಗೆ ಕೆಲಸವೇ ಇರುವುದಿಲ್ಲ. ಆದ್ಯತೆ ಮೇರೆಗೆ ಅವರು ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಬೇರೆ ಸಮಯದಲ್ಲಿ ದೂರುಗಳ ಸಂಖ್ಯೆ ಕಡಿಮೆಯಿರುವುದರಿಂದ ಈಗಿರುವ ವ್ಯವಸ್ಥೆಯೇ ಸಾಕಾಗುತ್ತದೆ ಎಂದು ಹೇಳುತ್ತಾರೆ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಸುಚೇತನ್.

Post a Comment

Previous Post Next Post