ಪವನ್ ನಿಧನಕ್ಕೆ ಪತ್ರಕರ್ತರ ಸಂಘ ತೀವ್ರ ಸಂತಾಪ

ಹಾಸನ: ಕೊರೊನಾ ಮಹಾಮಾರಿಗೆ ಬಲಿಯಾದ ಜಿಲ್ಲೆಯ ಉತ್ಸಾಹಿ ಹಾಗೂ ಯುವ ಪತ್ರಕರ್ತ ಪವನ್ ಹೆತ್ತೂರು ಅವರ ಅಕಾಲಿಕ ನಿಧನಕ್ಕೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಜಿಲ್ಲಾಧ್ಯಕ್ಷ ಎಸ್.ಆರ್.ಪ್ರಸನ್ನ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತರು, ಪವನ್ ಅವರ ನಿಧನ ಜಿಲ್ಲೆಯ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು.
ಸಂತಾಪ ಸಭೆಯಲ್ಲಿ ಭಾಗಿಯಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ.ಶಿವಾನಂದ ತಗಡೂರು, ಪವನ್ ನಮ್ಮ ಜಿಲ್ಲೆಯ ಪತ್ರಕರ್ತ. ಚಿಕ್ಕ ವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತುಂಬಾ ನೋವಿನ ವಿಚಾರ ಎಂದರು.
ಆರಂಭದಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ನಂತರ ಪ್ರಜಾವಾಣಿ ಸೇರಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು. ರಾಜ್ಯದಲ್ಲಿ ಹಲವು ಪತ್ರಕರ್ತರಿಗೆ ಕೊರೊನಾ ಸೋಂಕು ತಗುಲಿದ್ದರೂ ಅದೃಷ್ಟವಶಾತ್ ಗುಣಮುಖರಾಗಿದ್ದರು. ಆದರೆ ಪವನ್ ಚೇತರಿಸಿಕೊಳ್ಳದೇ ಹೋಗಿದ್ದು ತುಂಬಾ ನೋವಿನ ಸಂಗತಿಯಾಗಿದೆ. ಇದಕ್ಕೆ ಪವನ್ ಅವರ ನಿರ್ಲಕ್ಷ್ಯವೂ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪತ್ರಕರ್ತರು, ಎಚ್ಚೆತ್ತು ತಮ್ಮ ಮತ್ತು ಕುಟುಂಬದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಮನವಿ ಮಾಡಿದರು.
ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ ಪವನ್ ಇಂದು ನಮ್ಮ ಕಣ್ಣ ಮುಂದೆ ಇಲ್ಲದಿರುವುದು ನೋವಿನ ಸಂಗತಿ. ಇಂಥ ಪರಿಸ್ಥಿತಿ ಯಾವುದೇ ಪತ್ರಕರ್ತನಿಗೆ ಬರುವುದು ಬೇಡ, ಎಲ್ಲರೂ ಎಚ್ಚರಿಕೆ ವಹಿಸಿ ಎಂದು ವಿನಂತಿ ಮಾಡಿದರು.
ಮಾಜಿ ಅಧ್ಯಕ್ಷರಾದ ಬಿ.ಆರ್.ಉದಯ ಕುಮಾರ್ ಮಾತನಾಡಿ, ತುಂಬಾ ಒತ್ತಡದಿಂದ ಕೆಲಸ ಮಾಡುವ ನಾವುಗಳು ಎಚ್ಚರಿಕೆಯನ್ನೂ ಮರೆಯಬಾರದು. ಪತ್ರಕರ್ತರ ಸಂಘದಲ್ಲಿ ಕ್ಷೇಮಾಭಿವೃದ್ಧಿ ನಿಧಿ ಹೆಚ್ಚಳ ಮಾಡುವ ಮಾಡುವ ಸಂಕಷ್ಟದಲ್ಲಿರುವ ಹಾಗೂ ಅಕಾಲಿಕ ಮರಣಕ್ಕೆ ತುತ್ತಾದವರ ನೆರವಿಗೆ ಧಾವಿಸುವ ಕೆಲಸ ಮಾಡಬೇಕು ಎಂದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರವಿನಾಕಲಗೂಡು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಯಾವುದೋ ಕಾರಣಕ್ಕೆ ಜೀವ ಕಳೆದುಕೊಂಡ ಪತ್ರಕರ್ತರ ಕುಟುಂಬಗಳಿಗೆ ಸಿಎಂ ಕಡೆಯಿಂದ ನೇರವಾಗಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತಿರುವುದು ಇತಿಹಾಸದಲ್ಲೇ ಮೊದಲು ಎಂದರು.
ಇದೇ ರೀತಿ ಪತ್ರಕರ್ತರಾದ ಹೆತ್ತೂರು ನಾಗರಾಜ್, ಹರೀಶ್ ಕೆ.ಎಂ. ಮೊದಲಾದವರು ಮಾತನಾಡಿ, ಯುವ ಪತ್ರಕರ್ತರ ದುರಂತ ಸಾವಿಗೆ ಕಂಬನಿ ಮಿಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಆರ್.ಪ್ರಸನ್ನ ಕುಮಾರ್, ಪವನ್ ನಮ್ಮ ತಾಲೂಕಿನ ಹುಡುಗ. ಅವನ ಸಾವು ಅಪಾರ ನೋವು ತಂದಿದೆ ಎಂದರು. ಇದೇ ವೇಳೆ ವಿದ್ಯುನ್ಮಾನ ಪತ್ರಕರ್ತರು ಸೇರಿದಂತೆ ಎಲ್ಲರೂ ಕೊರೊನಾ ಬಗ್ಗೆ ಎಚ್ಚೆತ್ತು ವೃತ್ತಿ ನಿರ್ವಹಿಸಬೇಕು ಎಂದರು.
ಇದಕ್ಕೂ ಮುನ್ನ ಅಗಲಿದ ಯುವ ಪತ್ರಕರ್ತನಿಗೆ ಒಂದು ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಸಂತಾಪ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹಿಂದೂ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ನಗರ ಕಾರ್ಯದರ್ಶಿ ಸಿ.ಬಿ.ಸಂತೋಷ್ ಸೇರಿದಂತೆ ಹಲವು ಹಿರಿಯ ಹಾಗೂ ಕಿರಿಯ ಪತ್ರಕರ್ತರು ಹಾಜರಿದ್ದರು.

Post a Comment

Previous Post Next Post