ಮಾಹಿತಿಗಳನ್ನು ಹೊತ್ತು ತರುವ ಮಾಧ್ಯಮಗಳು



ನಾವು, ಈಗಿನ ಎರಡು ದಶಕಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಬಹಳ ಎತ್ತರಕ್ಕೆ ಬೆಳೆದಿರುವುದನ್ನು ನಾವು ಗಮನಿಸಬಹುದಾಗಿದೆ. ದೇಶ ವಿದೇಶದ ಮಾಹಿತಿಗಳು ಕುಳಿತಲ್ಲಿಯೇ ನಮಗೆ ಲಭಿಸುತ್ತಿದೆ. ದೃಶ್ಯ ಮಾಧ್ಯಮವಾಗಲಿ, ಪತ್ರಿಕಾ ಮಾಧ್ಯಮವಾಗಲಿ ಇದಕ್ಕೆ ಪೂರಕವಾದ ಮಾಹಿತಿಗಳನ್ನು ಜನತೆಗೆ ತಲುಪಿಸುತ್ತ ಬಂದಿದ್ದಾರೆ. ಒಂದು ಸಣ್ಣ ಹಳ್ಳಿಯಲ್ಲಿನ ಸಮಸ್ಯೆಯನ್ನು ಗುರುತಿಸಿ ಸರ್ಕಾರದ ಗಮನಕ್ಕೆ ತರುಲೆಂದು ಮಾಧ್ಯಮದವರು ಶ್ರಮಿಸುತ್ತಲೇ ಬಂದಿದ್ದಾರೆ. ಜನರ ಕಷ್ಟಗಳನ್ನು ಕೇಳಿ ಅವರಿಗೆ ಪರಿಹಾರ ನೀಡುವ ಧ್ಯೇಯೋದ್ದೇಶವು  ಈ ಯೋಜನೆಗಿದೆ. ನಮ್ಮ ಮಾಧ್ಯಮದವರು, ಮೂಢನಂಬಿಕೆ, ಕೊಲೆ, ಅತ್ಯಾಚಾರ, ರೈತರ  ಬೆಳೆ ನಾಶ, ಅವರ ಕಷ್ಟ ನಷ್ಟ, ನೆರೆಪೀಡಿತ ಪ್ರದೇಶ ಅಥವಾ ಬರಗಾಲ ಪೀಡಿತ ಪ್ರದೇಶಗಳಲ್ಲಿನ ಜನರ ಬವಣೆಗಳು, ರಾಜಕೀಯ, ಮತದಾನ, ಭ್ರಷ್ಟಾಚಾರ, ದೊಡ್ಡ ದೊಡ್ಡ ಹಗರಣಗಳು  ಹೀಗೆ ಹತ್ತು ಹಲವಾರು ವಿಷಯಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತ ಬಂದಿದೆ. ಅಲ್ಲದೆ ಮನೋರಂಜನೆಗಾಗಿ ಸಿನಿಮಾ, ಸಂಗೀತ, ಭಕ್ತಿಸಾರ, ಜ್ಯೋತಿಷ್ಯ ಶಾಸ್ತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಲಿವೆ. 

ಇನ್ನು ಪತ್ರಿಕೆ, ಮಾಸಿಕ ಪತ್ರಿಕೆಗಳು ಕೂಡ ಇಂತಹದೇ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾಹಿತ್ಯ, ಪ್ರವಾಸಿ ಸ್ಥಳಗಳ ಮಾಹಿತಿ, ಕವಿಗಳ ಪರಿಚಯ, ಮಹಿಳಾ ಪುರವಣಿ, ಕೃಷಿ ಪುರವಣೆ, ಮಕ್ಕಳ ಸಾಹಿತ್ಯ, ವ್ಯವಹಾರ ,ಉದ್ಯೋಗವಕಾಶಗಳ ಪುರವಣೆ , ವೈದ್ಯ ಲೋಕ, ವಿಜ್ಞಾನ, ವಿಸ್ಮಯ, ಆರೋಗ್ಯ- ಆಹಾರ ಎಂದು ಅನೇಕ ವಿಧದ ಯೋಜನೆಗಳನ್ನು ರೂಪಿಸಿಕೊಂಡು ಪ್ರಕಟಿಸುತ್ತ ಬಂದಿದ್ದಾರೆ. ಇದರಿಂದ ಬದಲಾವಣೆ ಸಾಧ್ಯವಾಗುತ್ತದೆ. ಹೊಸ ಯುವ ಬರಹಗಾರರಿಗೆ ಅವಕಾಶ ದೊರೆಯುತ್ತದೆ. ಅಲ್ಲದೇ ಇನ್ನಷ್ಟು ಪಕ್ವತೆ ಮೂಡಲು ಸಹಾಯವಾಗುತ್ತದೆ. ಕುಳಿತಲ್ಲಿಯೇ ವಿಷಯಗಳ ಓದಿ ಜ್ಞಾನ ವರ್ದಿಸಿಕೊಳ್ಳಬಹುದು. ಮಾಹಿತಿಗಳ ಕಲೆ ಹಾಕಬಹುದು. ಜೀವನದಲ್ಲಿ ಬದಲಾವಣೆಯನ್ನು ಕಂಡುಕೊಳ್ಳಬಹುದು. ಅಷ್ಟೆ ಏಕೆ ಉದಾಹರಣೆಗೆ ಪ್ರೇಕ್ಷಣೀಯ ಸ್ಥಳದ ಬಗ್ಗೆ ಮಾಹಿತಿ ಇರುವ ಲೇಖನ ಓದಿದಾಗ ಒಮ್ಮೆ ನಾವು ಕೂಡ ಅಲ್ಲೆಲ್ಲ ಸುತ್ತಿ ಬಂದ ಹಾಗಾಗುತ್ತದೆ.

ಒಂದು ದೇಶದ ಸಮಸ್ಯೆ ಅದಕ್ಕೆ ಕಂಡುಕೊಂಡ ಪರಿಹಾರದ ಬಗ್ಗೆ ಅನ್ಯ ದೇಶಗಳು ಗಮನಿಸಿ, ಅವಲೋಕಿಸಿದಾಗ ತಮಗೆ ಮುಂಬರುವ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಲ್ಲದೇ , ಅವರಿಗೂ ಸಲಹೆ ಸೂಚನೆಗಳನ್ನು ನೀಡಿ ಪರಿಹರಿಸಬಹುದಾಗಿದೆ. ದೇಶ ದೇಶಗಳಲ್ಲಿ ಸ್ನೇಹ ಬೆಳೆಸಲು ಸಹಾಯ ಮಾಡುತ್ತದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಸಾಧನಗಳು ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್ ಎನ್ನಬಹುದು. ಇದರಿಂದ ಉದ್ಯೋಗವಕಾಶ, ಹಣ ಸಂಪಾದನೆಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ವಿವಿಧ ಮಾಹಿತಿಗಳು, ಪ್ರತಿಭೆಗಳಿಗೆ ಅವಕಾಶ, ಅವರ ಕಲೆಗೆ ಬೆಲೆ ಕೂಡ ಸಿಗುತ್ತಿದೆ. ಈಗಿನ ಕರೋನಾ ಕಾಲದಲ್ಲಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಅಂತರರಾಷ್ಟ್ರೀಯ ಕಂಪೆನಿಗಳಿಗಂತೂ ಇದು ಸಂಜೀವಿನಿಯಾಗಿದೆ. ಅದರಲ್ಲಿಯೂ ಎಳೆ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿ ದುರುಪಯೋಗವಾಗುವುದು ಒಂದು ಕಡೆ ನಡೆಯುತ್ತಲಿದ್ದರೂ ಯುವ ಜನತೆಗೆ ಪ್ರೋತ್ಸಾಹ ನೀಡುತ್ತ ಅವರ ಕಲೆಯನ್ನು ಮುಖ್ಯವಾಹಿನಿಗೆ ತರಲು ಅನೇಕ ಸಾಮಾಜಿಕ ಮಾಧ್ಯಮಗಳು ಸಹಾಯಕವಾಗಿವೆ. ಹಾಗಾಗಿ ಪ್ರತಿವರ್ಷ ಅಕ್ಟೋಬರ್೨೪ ರಂದು "ವಿಶ್ವ ಮಾಹಿತಿ ದಿನ"ವನ್ನು ( World Development Information Day ) ಆಚರಿಸಲಾಗುತ್ತಿದೆ.

Post a Comment

Previous Post Next Post