ಭಾರತದ ಹಲವು ಬ್ಯಾಂಕ್ ಗಳಿಗೆ ಕೋಟ್ಯಂತರ ರೂ. ವಂಚನೆ ಮಾಡಿ ವಿದೇಶ ಸೇರಿರುವ ಒಂದು ಕಾಲದ ಮದ್ಯದ ದೊರೆ ವಿಜಯ್ ಮಲ್ಯಗೆ ಇಡಿ ಶಾಕ್ ನೀಡಿದೆ. ಈ ಶಾಕ್ ಕೊಟ್ಟಿರುವುದು ಫ್ರಾನ್ಸ್ ನಲ್ಲಿ.
ಅಕ್ರಮ ಹಣ ವರ್ಗಾವಣೆ ಕಾನೂನಿನಡಿಯಲ್ಲಿ ಫ್ರಾನ್ಸ್ ನಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ನಾವು ಕೊಟ್ಟ ಮನವಿ ಮೇರೆಗೆ ಫ್ರಾನ್ಸ್ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು, 32 ಅವಿನ್ಯೂ ಪೊಚ್ ನಲ್ಲಿದ್ದ 1.6 ಮಿಲಿಯನ್ ಯುರೋ ಅಂದರೆ 14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಇಡಿ ತಿಳಿಸಿದೆ.
ಜಪ್ತಿ ಮಾಡಲಾದ ಆಸ್ತಿ ಮೌಲ್ಯ 1.6 ಮಿಲಿಯನ್ ಯೂರೋ ಅಂದರೆ ಭಾರತೀಯ ರೂಪಾಯಿಯಲ್ಲಿ ₹14 ಕೋಟಿಯಷ್ಟಾಗುತ್ತದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯಡಿ ಈ ತನಿಖೆ ನಡೆದಿದ್ದು, ಫ್ರಾನ್ಸ್‌ನಲ್ಲಿ ಆಸ್ತಿ ಮಾಡಲು ಕಿಂಗ್ ಫಿಷರ್ ಏರ್‌ಲೈನ್ ಖಾತೆಯಿಂದ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದೆ.
ಸದ್ಯ, ನಿಷ್ಕ್ರಿಯಗೊಂಡಿರುವ ಕಿಂಗ್ ಫಿಷರ್ ಏರ್‌ಲೈನ್ಸ್ ಸಂಸ್ಥೆಯ ₹9000 ಕೋಟಿ ಸಾಲದ ಸುಸ್ತಿದಾರನಾಗಿರುವ ವಿಜಯ್ ಮಲ್ಯ, 2016ರಿಂದ ಬ್ರಿಟನ್ನಿನಲ್ಲೇ ನೆಲೆಸಿದ್ದಾರೆ. 2017ರಲ್ಲೇ ಸ್ಕಾಟ್‌ಲ್ಯಾಂಡ್ ಯಾರ್ಡ್ ನ್ಯಾಯಾಲಯದಿಂದ ಹಸ್ತಾಂತರ ವಾರೆಂಟ್ ಜಾರಿಯಾಗಿದ್ದು, ವಿಜಯ್ ಮಲ್ಯ ಜಾಮೀನು ಪಡೆದಿದ್ದಾರೆ.
ಬ್ರಿಟನ್ನಿನ ನ್ಯಾಯಾಂಗ ಮತ್ತು ಗೌಪ್ಯ ರೀತಿಯ ಪ್ರತ್ಯೇಕ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವಿಜಯ್ ಮಲ್ಯ ಅವರನ್ನ ಭಾರತಕ್ಕೆ ಹಸ್ತಾಂತರ ಸಾಧ್ಯವಿಲ್ಲ ಎಂದು ಅಕ್ಟೋಬರ್ 5ರಂದು ಕೇಂದ್ರ ಸರ್ಕಾರ ಸುಪ್ರೀ ಕೋರ್ಟ್‌ಗೆ ತಿಳಿಸಿತ್ತು.