ಬೈಕ್ ರ್ಯಾಲಿ ಮೂಲಕ ಸರಕಾರಿ ಕಛೇರಿ, ಬಸ್ ಸಂಚಾರ, ಅಂಗಡಿ ಮುಗ್ಗಟ್ಟುಗಳ ಬಂದ್
ಹಾಸನ: ಬಿಜೆಪಿ ಸರಕಾರವು ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದನ್ನು ವಿರೋಧಿಸಿ ಮತ್ತು ಸ್ವಾಭಿಮಾನ ಕನ್ನಡಿಗರನ್ನು ವಸೂಲಿ ಎಂದು ಕರೆದಿರುವ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಖಂಡಿಸಿ ಶನಿವಾರ ಕರೆದಿದ್ದ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಹಾಸನದಲ್ಲೂ ಕನ್ನಡ ಪರ ಹಾಗೂ ಪ್ರಗತಿಪರ ಹೋರಾಟಗಳ ಸಂಘದ ಒಕ್ಕೂಟದಿಂದ ಬೆಂಬಲ ನೀಡಿ ಮೆರವಣಿಗೆ ಮತ್ತು ಬೈಕ್ ರ್ಯಾಲಿ ಮೂಲಕ ಸರಕಾರಿ ಕಛೇರಿಗೆ ಮುತ್ತಿಗೆ, ಬಸ್ ಸಂಚಾರಕ್ಕೆ ತಡೆ, ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಪ್ರತಿಭಟನೆಗಾರರು ಕೈಮುಗಿದು ಮನವಿ ಮಾಡಿದರು.
ಬಿಜೆಪಿ ಸರ್ಕಾರದ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಬಂದ್ ಗೆ ಜಿಲ್ಲಾ ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ಬಾಳು ಗೋಪಾಲ್ ನೇತೃತ್ವದಲ್ಲಿ ವಿವಿಧ ಸಂಘಟನೆಯವರು ನಗರದ ಹೇಮಾವತಿ ಪ್ರತಿಮೆ ಬಳಿ ರಾಜ್ಯ ಸರ್ಕಾರ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹಾಗು ಸಚಿವ ಆರ್. ಅಶೋಕ್ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ಮರಾಠ ಪ್ರಾಧಿಕಾರ ರಚನೆ ಬೇಡ ರಾಜ್ಯ ಸರ್ಕಾರ ಕೂಡಲೆ ಪ್ರಾಧಿಕಾರ ವಾಪಸ್ಸು ತೆಗೆದುಕೊಳ್ಳುವಂತೆ ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯ ಮಾಡಿದರು. ಮೊದಲು ಬೈಕ್ ರ್ಯಾಲಿ ಮೂಲಕ ಹಾಸನ ಹೊಸ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಸಂಚರಿಸದಂತೆ ಘೋಷಣೆ ಕೂಗಿದರು. ಹೇಮಾವತಿ ಪ್ರತಿಮೆ ಬಳಿಯಿಂದ ಪಾದಯಾತ್ರೆ ಮಾಡಿಕೊಂಡು ಮೆರವಣಿಗೆ ಮೂಲಕ ನಗರ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಮುಂದೆ ಚಲಿಸದಂತೆ ಮನವಿ ಮಾಡಿದರು. ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ತೆರಳಿ ಅಂಗಡಿ ಬಾಗಿಲು ತೆಗೆದ ಮಾಲೀಕರಿಗೆ ಕೈಮುಗಿದು ಇದೊಂದು ದಿವಸ ಬಾಗಿಲು ಹಾಕುವ ಮೂಲಕ ಕನ್ನಡ ನಾಡಿನ ಗೌರವ ಉಳಿಸುವಂತೆ ಕೋರಿದರು. ಪ್ರಯಾಣಿಕರನ್ನು ಕುರುಳಿಸಿಕೊಂಡು ಸಂಚಾರ ಮಾಡುತ್ತಿದ್ದ ಬಸ್ ತಡೆದು ಪ್ರಯಾಣಿಕರಿಗೆ ಮನವಿ ಮಾಡಿ ಬಸ್ ವಾಪಸ್ ಕಳುಹಿಸಿದರು. ಇನ್ನು ಆಟೋ, ಟ್ಯಾಕ್ಸಿ ಚಾಲಕರಿಗೂ ಕೂಡ ಕೋರಿದರು. ಮದ್ಯಾಹ್ನದ ವೇಳೆಗೆ ಬೈಕ್ ರಾಲಿ ಮುಖಾಂತರ ಸಾಗಿ ರಾಜ್ಯ ಸರಕಾರದ ಕಛೇರಿಗಳಾದ ಜಿಲ್ಲಾ ಪಂಚಾಯತ್, ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್ ಕಛೇರಿ ಸೇರಿದಂತೆ ನಾನಾ ಸರಕಾರಿ ಕಚೇರಿಗೆ ತೆರಳಿ ಘೋಷಣೆ ಕೂಗಲಾಯಿತು. ಮುಖ್ಯ ರಸ್ತೆಗಳಲ್ಲಿ ಬಹುತೇಕ ಬಂದ್ ಆಚರಿಸಿರುವುದು ಕಂಡು ಬಂದಿತು.
ನಂತರ ಮಾತನಾಡಿದ ಕನ್ನಡ ಪರ ಹಾಗೂ ಪ್ರಗತಿಪರ ಹೋರಾಟಗಳ ಸಂಘದ ಒಕ್ಕೂಟದ ಅಧ್ಯಕ್ಷರಾದ ಬಾಳು ಗೋಪಾಲ್ ಮಾತನಾಡಿ, ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಬಂದಿದ್ದು, ಬಂದ್ ಗೆ ಸಹಕರಿಸುವಂತೆ ಕಳೆದ ನಾಲ್ಕು ದಿನಗಳಿಂದ ಮನವಿ ಮಾಡಿದ್ದೇವು. ಸಾರಿಗೆ ಬಸ್ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದರೂ ಬೆಳಿಗ್ಗೆ 6 ಗಂಟೆಯಿಂದಲೇ ಸಿಟಿ ಬಸ್ ಬಿಟ್ಟಿದ್ದಾರೆ. ಹಾಸನ ಜಿಲ್ಲೆಯ ಸಾರ್ವಜನಿಕರು ಬಂದ್ ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ-ಮುಗ್ಗಟ್ಟನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸ್ವಾಭಿಮಾನ ಕನ್ನಡಿಗರನ್ನು ವಸೂಲಿ ಎಂದು ಕರೆಯುವ ಬಸವನಗೌಡ ಪಾಟೀಲ್ ಯತ್ನಾಳ ರವರ ಯಾವ ಕಾರ್ಯಕ್ರಮ ನಡೆಯಲು ನಾವು ಬಿಡುವುದಿಲ್ಲ. ಅವರಿಗೆ ಕನ್ನಡಪರ ಸಂಘಟನೆಗಳು ಮಸಿ ಬಳಿಯುವ ಕೆಲಸ ಮಾಡಲಾಗುವುದು ಎಂದರು. ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಮಿಳು ನಿಗಮ ರಚಿಸಿವುದಾಗಿ ಹೇಳಿದ್ದು, ಅದು ಅಶ್ವಥ್ ನಾರಾಯಣ ಅಪ್ಪನ ಮನೆ ದುಡ್ಡಲ್ಲ. ಕನ್ನಡಿಗರ ತೆರಿಗೆ ಹಣ. ಚುನಾವಣೆ ಗೆಲ್ಲಲು ನಮ್ಮ ಹಣ ಖರ್ಚು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ನಾವು ಅಂಗಡಿ- ಮುಗ್ಗಟ್ಟು ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್. ಸತೀಶ್ ಪಟೇಲ್, ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರಶಾಂತ್ ನಾಗರಾಜ್, ಜಯಕರ್ನಾಟಕ ಸಂಘಟನೆಯ ಕಾಯಾಧ್ಯಕ್ಷ ಸಂಗಂ, ಚೌಡವಳ್ಳಿ ಜಗದೀಶ್, ಹರೀಶ್ ಬಾಬು, ನವಕರ್ನಾಟಕ ಯುವಶಕ್ತಿ ರಾಜ್ಯ ಮುಖಂಡರಾದ ಡಿ. ಶಂಕರಗೌಡ, ಕರವೇಯ ಸೀತರಾಮು, ಪ್ರೀತಂ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದಿನೇಶ್, ರೈತ ಸಂಘದ ಅಧ್ಯಕ್ಷ ಬಾಬು, ರಾಘವೇಂದ್ರ, ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್, ಪ್ರಜಾಶಕ್ತಿ ವೇದಿಕೆ ಪ್ರವೀಣ್ ಸೇರಿದಂತೆ ಇತರರು ಭಾಗವಹಿಸಿದರು.
Tags
ಹಾಸನ