ಬೇಲೂರು: ತಾಲ್ಲೂಕಿನ 37 ಗ್ರಾ.ಪಂ.ಗಳ 387 ಸ್ಥಾನಗಳ ಮತ ಎಣಿಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಗುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು.
ಫಲಿತಾಂಶ ಹೊರ ಬೀಳುತಿದ್ದಂತೆ ವಿಜಯಿಯಾದ ಅಭ್ಯರ್ಥಿಗಳ ಬೆಂಬಲಿಗರು ಅಭ್ಯರ್ಥಿಗಳಿಗೆ ಹೂವಿನಹಾರ ಹಾಕಿ ಹೆಗಲ ಮೇಲೆ ಹೊತ್ತು ಘೋಷಣೆಗಳನ್ನು ಕೂಗುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ಸಾಮಾನ್ಯವಾಗಿತ್ತು.
ಗೆದ್ದ ಪತ್ನಿ- ಪತಿಗೆ ಸೋಲು: ಅರೇಹಳ್ಳಿ ಗ್ರಾಪಂ ಸಾಮಾನ್ಯ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ ಕಿಸಾನ್ ಖೇತ್ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ತುಳಸಿದಾಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಚ್ಚಿನ್ ವಿರುದ್ಧ ಒಂದು ಮತದ ಅಂತರದಲ್ಲಿ ಸೋತರು.
ಒಂದು ಹಾಗೂ ಎರಡು ಮತಗಳ ಅಂತರದಲ್ಲಿ ಸೋಲು ಆದಾಗ ಅಭ್ಯರ್ಥಿಗಳು ಮರು ಮತ ಎಣಿಕೆಗೆ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ ಇದಕ್ಕೆ ಚುನಾವಣಾಧಿಕಾರಿಗಳು ಆಸ್ಪದ ಕೊಡಲಿಲ್ಲ. ಇದರಿಂದ ಕೆಲ ಅಭ್ಯರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಸನ್ಯಾಸಿಹಳ್ಳಿ ಪಂಚಾಯಿತಿಯ ಹೊಸ ಉತ್ಪತ್ತನಹಳ್ಳಿ ಕ್ಷೇತ್ರದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಜೆಡಿಎಸ್ ಬೆಂಬಲಿತ ಶಾಂತೇಗೌಡ ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ಕಾಂಗ್ರೆಸ್ ಬೆಂಬಲಿತ ಶಿವೇಗೌಡ ನಡುವೆ ತೀವ್ರ ಹಣಾಹಣಿ ನಡೆದು ಶಿವೇಗೌಡ 3 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಕುಶಾವರ ಗ್ರಾ.ಪಂನ ಕಿರಗಡಲು ಎಸ್ಸಿ ಸ್ಥಾನಕ್ಕೆ ನಡೆದ ಮತ ಎಣಿಕೆಯಲ್ಲಿ ಅಭ್ಯರ್ಥಿಗಳಾದ ನಿರ್ವಾಣಯ್ಯ 75 ಹಾಗೂ ಪ್ರತಿಸ್ಪರ್ಧಿ ಸೋಮಯ್ಯ (ಸ್ವಾಮಿ) 75 ಸಮ ಮತ ಪಡೆದರು. ಈ ಸಂದರ್ಭ ತಹಶೀಲ್ದಾರ್ ಎನ್.ವಿ.ನಟೇಶ್ ಸಮ್ಮುಖದಲ್ಲಿ ಲಾಟರಿ ಎತ್ತಿದಾಗ ಸೋಮಯ್ಯ (ಸ್ವಾಮಿ)ಗೆ ಅದೃಷ್ಟ ಒಲಿಯಿತು.