ನೆರೆ ರಾಜ್ಯ ಕೇರಳದಲ್ಲಿ ಹಕ್ಕಿ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಆತಂಕದ ವಾತಾವರಣ ನಿರ್ಮಾನವಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ ಹಕ್ಕಿಗಳು ಸತ್ತಿರುವುದು ಬೇರೆ ಬೇರೆ ಕಾರಣಕ್ಕಾಗಿ. ಆದರೂ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ವರದಿ ಆಗದೇ ಇದ್ದರೂ, ಅನುಮಾನಾಸ್ಪದವಾಗಿ ಪಕ್ಷಿಗಳು ಸತ್ತಿದ್ದರೆ ಅದನ್ನು ಮುಟ್ಟಬೇಡಿ, ಕೋಳಿ ಮಾಂಸ, ಮೊಟ್ಟೆ ತಿನ್ನುವಾಗ ಹೆಚ್ಚಿ ಬೇಯಿಸಿ ತಿನ್ನಿ ಎಂದು ಸಲಹೆ ನೀಡಿದ್ದಾರೆ. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಗಡಿ ಭಾಗದ ಜಿಲ್ಲೆಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.
ಸಂಕ್ರಾಂತಿಗೆ ವಿಶೇಷ ಮಾರ್ಗಸೂಚಿ ಇಲ್ಲ
ರಾಜ್ಯದಲ್ಲಿ ಕೋವಿಡ್ ಕಾರಣಕ್ಕಾಗಿ ಸಂಕ್ರಾಂತಿಗೆ ಯಾವುದೇ ವಿಶೇಷ ಕಾರ್ಯಸೂಚಿ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಆದರೆ ಕೋವಿಡ್ ಮುನ್ನೆಚ್ಚರಿಕೆಯ ಕ್ರಮವಾಗಿ ಜನಜಂಗುಳಿ ಇಲ್ಲದೆ ಸರಳವಾಗಿ ಸಂಕ್ರಾಂತಿಯನ್ನು ಆಚರಿಸಿ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
Tags
ರಾಜ್ಯ