ನನ್ನ ಶಾಲೆ "ಮೈತ್ರಿ"... ನನ್ನ ಹೆಮ್ಮೆ... ಬೆಳ್ಳಿ ಹಬ್ಬದ ಸಂಭ್ರಮದೊಡನೆ ಗ್ರಾಮೀಣ ಸಂಭ್ರಮ.

- ಭುವನ ವಿಭಾ

ನನ್ನ ಶಾಲೆಗೀಗ ಬೆಳ್ಳಿ ಹಬ್ಬದ ಸಂಭ್ರಮ. ನನ್ನ ವಿದ್ಯಾಭಾಸ ಮಾತ್ರವಲ್ಲದೆ ನನ್ನ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿರುವುದು ನನ್ನ ಶಾಲೆ. ಇಂದಿಗೂ ನನ್ನ ಶಾಲೆ ಎಂದರೆ ನನಗೊಂದು ಹೆಮ್ಮೆ. ನನ್ನ ಬಿಡುವಿನ ಕಾಲದಲ್ಲಿ ಅಥವಾ ಶಾಲೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಿಡುವು ಮಾಡಿಕೊಂಡು ಹೋಗುವ ಪರಿಪಾಠವಿದೆ. ತೀರಾ ಗ್ರಾಮೀಣ ಪ್ರದೇಶದಲ್ಲಿ ಇಷ್ಟೆಲ್ಲಾ ಸೌಲಭ್ಯ ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ಮತ್ತೊಂದು ಶಾಲೆಯನ್ನು ನಾನು ನೋಡಿಲ್ಲ.


ಶಾಲಾ ಆರಂಭದ ದಿನಗಳಲ್ಲಿ , ನನ್ನ ತಂದೆಯೇ ಎಷ್ಟೋ ಬಾರಿ ಧರ್ಮರಾಜ್ ಸರ್ ಗೆ ಶಾಲೆಯ Fees ಅನ್ನು ಹೆಚ್ಚು ಮಾಡಿ ಎಂದಿರುವ ನಿದರ್ಶನಗಳು ಕೂಡಾ ಇದೆ. ಕಾರಣ, ನನ್ನ ಶಾಲೆಯಲ್ಲಿ ನೀಡುತ್ತಿದ್ದ ಗುಣಮಟ್ಟದ ಶಿಕ್ಷಣ ಅಂತಹದಿತ್ತು. ಆದರೆ, ಸರ್ ಎಲ್ಲರಿಗೂ ಕೈಗೆಟಕುವ ಶಿಕ್ಷಣ ನೀಡಿದ್ದಾರೆ. ಅಲೆಮಾರಿ ಜನಾಂಗದ ಒಬ್ಬ ಹುಡುಗನ ಬುದ್ಧಿಮತ್ತೆ ಕಂಡು ಬೆರಗಾಗಿ ಅವನನ್ನು ಶಾಲೆಗೆ ಸೇರಿಸಿಕೊಂಡು ಉಚಿತ ಶಿಕ್ಷಣ ನೀಡಿದರು.
ಶಿಕ್ಷಣ ಎಂದರೆ ಬರೀ ಅಕ್ಷರವಲ್ಲ. ವಿದ್ಯೆ ವಿನಯವನ್ನು ಕಲಿಸುತ್ತದೆ. ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಶಾಲೆಯ ಪಠ್ಯದ ಜೊತೆ ಜೊತೆಗೆ ಶಾಲೆಯಲ್ಲಿ ಆತ್ಮರಕ್ಷಣಾ ಕಲೆ ಕರಾಟೆ, ಸಂಗೀತ, ನೃತ್ಯ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಲೆ ಇದ್ದರೂ ಇಲ್ಲಿ ಸ್ಮಾರ್ಟ್ ಕ್ಲಾಸ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ರಂಗಶಿಕ್ಷಣಕ್ಕಾಗಿ ನಗರಗಳಲ್ಲಿ ಎಷ್ಟೋ ಮಂದಿ ಅಲೆಯುತ್ತಾ ಇದ್ದಾರೆ. ಆದರೆ, ಇಲ್ಲಿ ರಂಗಶಿಕ್ಷಣವನ್ನು ಸಹಾ ಉಚಿತವಾಗಿ ನೀಡಲಾಗಿದೆ. "ಪಂಜರ ಶಾಲೆ", "ನನ್ನ ಗೋಪಾಲ" ದಂತಹಾ ಉತ್ತಮ ನಾಟಕಗಳ ರಂಗ ಪ್ರದರ್ಶನ ಅತ್ಯಂತ ಕಡಿಮೆ ಸಮಯದ ತಯಾರಿಯಲ್ಲಿ ನಡೆದಿರುವುದು ಇಲ್ಲಿನ ಶಿಕ್ಷಣದ ಗುಣಮಟ್ಟ ಹಾಗೂ ಮಕ್ಕಳ ಕಲಿಕೆಗೊಂದು ಸಾಕ್ಷಿ. ಸಿಟಿಗಳ ಸಮ್ಮರ್ ಕ್ಯಾಂಪ್ ಗಳ ಪರ್ಯಾಯವಾಗಿ ಪ್ರತಿವರ್ಷ ನನ್ನ ಮೈತ್ರಿ ಶಾಲೆಯಲ್ಲಿ ಸರ್ ಚಿಣ್ಣರ ಮೇಳವನ್ನು ಮಾಡುತ್ತಿದ್ದರು. ಇಂದಿಗೂ ಅವೆಲ್ಲವೂ ಅಚ್ಚಳಿಯದ ನೆನಪುಗಳು. ಈಗ ಶಾಲೆಯಲ್ಲಿ ಹೇಳಿಕೊಟ್ಟಿರುವ ಬ್ರೈನ್ ಜಿಮ್, ಯೋಗ ಮತ್ತು ಧ್ಯಾನಗಳು ಸಹಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ.
ಇಂದು ವೇದಗಳನ್ನು ಎಷ್ಟು ಶಾಲೆಗಳಲ್ಲಿ ಕಲಿಸಲಾಗುತ್ತಿದೆ..?
ಅಪರೂಪದ ವೇದಗಳ ಪಾಠ ಇಲ್ಲಿ ನಡೆಯುತ್ತದೆ.
ಇಲ್ಲಿ ಮಕ್ಕಳ ಪ್ರಥಮ ಅಕ್ಷರಾಭ್ಯಾಸವನ್ನು ಅವರ ತಂದೆ-ತಾಯಿಯರೇ ಅಕ್ಕಿಯಲ್ಲಿ ಅಕ್ಷರ ತಿದ್ದಿಸುವ ಮೂಲಕ ಮಾಡಿಸುತ್ತಾರೆ. ಮಕ್ಕಳು ತಾಯಿ ತಂದೆಯರ ಪಾದಪೂಜೆ ಮಾಡುವ ಮೂಲಕ ಉತ್ತಮ ಸಂಸ್ಕಾರವನ್ನು ಕಲಿಯುತ್ತಿದ್ದಾರೆ.

ಆರೋಗ್ಯದ ದೃಷ್ಟಿಯಿಂದ ಇಂದು ಪಾಠದ ಜೊತೆಗೆ ಆಟ ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಗಲ್ಲಿ-ಗಲ್ಲಿಗಳಲ್ಲಿ ಆಡುತ್ತಿದ್ದ ಕ್ರಿಕೆಟ್, ಮರಕೋತಿ, ಲಗೋರಿ, ಚಿನ್ನಿ-ದಾಂಡು, ರತ್ತೋ-ರತ್ತೋ, ಟೋಪಿ ಆಟ, ಕುಂಟೆಬಿಲ್ಲೆ, ಹಗ್ಗದಾಟ ಹೀಗೆ ಎಷ್ಟೋ ಆಟಗಳು ಕಣ್ಮರೆಯಾಗುತ್ತಿವೆ. ಈಗಿನ ಆನ್ಲೈನ್ ಕ್ಲಾಸ್ ಗಳ ಭರಾಟೆಯಲ್ಲಿ ಈ ಆಟಗಳು ಮತ್ತಷ್ಟು ಕಣ್ಮರೆಯಾಗುತ್ತಿವೆ, ಬರೀ ವಿಡಿಯೋ ಗೇಮ್, ಮೊಬೈಲ್ ಗೇಮ್ ಗಳಷ್ಟೇ ಆಟಕ್ಕೆಂದು ಸೀಮಿತವಾಗುತ್ತಿವೆ. ಈಗಿನ ಮಕ್ಕಳಿಗೇ ಎಷ್ಟೋ ಆಟಗಳ ಪರಿಚಯವಿಲ್ಲ. ನಮ್ಮ ಮುಂದಿನ ಪೀಳಿಗೆಗಂತೂ ಇವು ಕಣ್ಮರೆಯಾಗಬಹುದೋ ಏನೋ.. ಅದಕ್ಕಾಗಿ ಮೈತ್ರಿ ಶಾಲೆಯಂಗಳದಲ್ಲಿ ಈಗ ನಶಿಸಿ ಹೋಗುತ್ತಿರುವ ಆಟಗಳನ್ನು ನೆನಪಿಸಿಕೊಳ್ಳಲು ಹಾಗೂ ಹಳ್ಳಿಯ ಸೊಗಡನ್ನು ಹಾಗೂ ಪರಿಕರಗಳನ್ನು ಪರಿಚಯಿಸಲು ಈ ಬಾರಿ ಬೆಳ್ಳಿಹಬ್ಬದಲ್ಲಿ ಗ್ರಾಮೀಣ ಸಂಭ್ರಮ ನಡೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ಈ ರೀತಿಯ ಗ್ರಾಮೀಣ ಕ್ರೀಡಾಕೂಟ ಹಾಗೂ ಸುಗ್ಗಿ ಸಂಭ್ರಮದ ಆಚರಣೆ ನಡೆಯುತ್ತಿದೆ. ಈ ಬಾರಿಯ ಬೆಳ್ಳಿ ಹಬ್ಬದಲ್ಲಿ ಮತ್ತಷ್ಟು ವಿಶೇಷವಿದೆ. ಏನೆಂದು ನಾನು ಈಗ ಹೇಳುವುದಿಲ್ಲ. ನೀವೇ 30-3-2021 ರ ಮಂಗಳವಾರ 9 ಗಂಟೆಗೆ ಗಂಡಸಿ ಹ್ಯಾಂಡ್ ಪೋಸ್ಟ್ ನ ಮೈತ್ರಿ ಶಾಲೆಯಂಗಳಕ್ಕೆ ಬನ್ನಿ. ನೀವೂ ಬನ್ನಿ , ನಿಮ್ಮವರನ್ನೂ ಕರೆತನ್ನಿ. ಎಲ್ಲರೂ ಒಟ್ಟಾಗಿ ಗ್ರಾಮೀಣ ಸಂಭ್ರಮ ಆಚರಿಸೋಣ.
ಇಂದು ದಿನಗಳು ಓಡುತ್ತಿವೆ. ಕಾಲ ಬದಲಾಗುತ್ತಿದೆ. ಬದಲಾಗದೇ ಉಳಿದಿರುವುದು ಶಾಲೆಯ ಮೇಲಿನ ನನ್ನ ಅಭಿಮಾನ ಹಾಗೂ ನಮ್ಮೆಲ್ಲರ ಬಾಂಧವ್ಯ. ಅಂದಿಗೂ,ಇಂದಿಗೂ, ಎಂದೆಂದಿಗೂ ನನ್ನ ಶಾಲೆ ನನ್ನ ಹೆಮ್ಮೆ

Post a Comment

Previous Post Next Post