ಸಕಲೇಶಪುರ.ನಮ್ಮನ್ನು ಹೆತ್ತು, ಹೊತ್ತು ಸಾಕು ಸಲುಹಿದ ತಾಯಿ ನಿನ್ನೆ ರಾತ್ರಿ ವೇಳೆ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ. ಆದರೆ, ಮನೆ ಬಿಟ್ಟು ಹೋಗಿರುವ ಸಹೋದರಿಗೆ ನೀನು ಎಲ್ಲೇ ಇದ್ದರೂ ತಾಯಿಯ ಮೃತದೇಹವನ್ನು ನೋಡಲು ತವರಿಗೆ ಬಾ ತಂಗಿ ಎಂದು ಎಂದು ಅಣ್ಣ ಮನೆಯಲ್ಲಿ ಗೋಳಾಡುತ್ತಿರಯವ ದೃಶ್ಯ ಮನಕಲಕುವಂತಿದೆ.
ಮನೆಯಲ್ಲಿ ಕಡುಬಡತನ, ದೇಹದಲ್ಲಿ ಅನಾರೋಗ್ಯ, ಸಣ್ಣ ಪುಟ್ಟ ದುಡಿಮೆ ಮಾಡಿಕೊಂಡು ನಬ್ಬಿರನ್ನು ಸಾಕಿ ಬೆಳೆಸಿದ ತಾಯಿ ಈಗ ಸಾವನ್ನಪ್ಪಿದ್ದಾಳೆ. ನಿನ್ನನ್ನು ಎತ್ತಿ ಆಡಿಸಿ, ಬೆಳೆಸಿದ ತಾಯಿ ಈಗ ನಮ್ಮನ್ನು ಅಗಲಿದ್ದಾಳೆ. ಆದರೆ, ನೀನು ಮನೆಯನ್ನು ಬಿಟ್ಟು ಹೋಗಿದ್ದು, ಎಲ್ಲಿಯೇ ಇದ್ದರೂ ಕೊನೇ ಬಾರಿಗೆ ತಾಯಿ ಮುಖವನ್ನಾದರೂ ನೊಡಲು ಬರುವಂತೆ ಆಕೆಯ ಅಣ್ಣ ತಂಗಿಗೆ ಮನವಿ ಮಾಡಿದ್ದಾನೆ.
ತಾಯಿ ಮೃತದೇಹ ನೋಡಲು ಬರುವಂತೆ ತಂಗಿಗೆ ಅಣ್ಣ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಗಂಡನ ಬಿಟ್ಟು ತವರು ಮನೆಯಲ್ಲಿ ವಾಸವಿದ್ದ ಮಗಳು: ಇನ್ನು ಹಲವು ದಿನಗಳ ಹಿಂದೆ ಮನೆಬಿಟ್ಟು ಹೋಗಿರುವ ತಂಗಿ ವಾಪಸ್ ಬರುವಂತೆ ಅಣ್ಣ ಅಳಲು ತೋಡಿಕೊಂಡಿದ್ದಾನೆ. ತಾಯಿ ಮೃತಪಟ್ಟಿದ್ದಾಳೆ ಎಲ್ಲೇ ಇದ್ದರು ಬೇಗ ಮನೆಗೆ ಬಾ ಎಂದು ಸಹೋದರ ಮನವಿ ಮಾಡಿಕೊಳ್ಳುತ್ತಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿದೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಹೊನ್ನಮ್ಮ (55) ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾಳೆ. ಆದರೆ, ಗಂಡನನ್ನು ಬಿಟ್ಟು ತವರು ಸೇರಿದ್ದ ಹೊನ್ನಮ್ಮನ ಮಗಳು ಹರಿಣಿ ಇತ್ತೀಚೆಗೆ ಮನೆ ಬಿಟ್ಟು ಹೋಗಿದ್ದಾಳೆ. ಆದ್ದರಿಂದ ನೀನು ಎಲ್ಲೇ ಇದ್ದರೂ ಕೊನೇ ಬಾರಿಗೆ ತಾಯಿ ಮುಖವನ್ನಾದರೂ ನೋಡಲು ಬರುವಂತೆ ಅಳಲು ತೋಡಿಕೊಂಡಿದ್ದಾನೆ.
ಮಗಳು ಮಾಡಿದ್ದ ಸಾಲ ತೀರಿಸಲಾಗದೇ ತಾಯಿ ಸಾವು: ಇನ್ನು ಹೊನ್ನಮ್ಮನ ಪುತ್ರಿ ಹರಿಣಿ ಕೆಲವು ವರ್ಷಗಳ ಹಿಂದೆಯೇ ಗಂಡನ ಮನೆಯನ್ನು ತೊರೆದು ತಾಯಿ ಮನೆಗೆ ಬಂದಿದ್ದಳು. ತವರು ಮನೆಗೆ ಬಂದು ವಿವಿಧ ಉದ್ಯಮಗಳನ್ನು ಮಾಡುವ ಇಚ್ಛೆಯಿಂದ ತವರೂದಿನ ವಿವಿಧ ಸ್ವಸಹಾಯ ಸಂಘಗಳಲ್ಲಿ 5 ಲಕ್ಷ ಸಾಲ ಮಾಡಿದ್ದಳು. ಸಾಲ ತೀರಿಸಲಾಗದೆ ಮನೆ ಬಿಟ್ಟು ಪರಾರಿಯಾಗಿದ್ದಳು. ಮಗಳು ಮಾಡಿದ್ದ ಸಾಲ ತೀರಿಸುವಂತೆ ಹೊನ್ನಮ್ಮನಿಗೆ ಸಾಲಗಾರರಿಂದ ಕಿರುಕುಳ ಮಾಡಲಾಗುತ್ತಿತ್ತು. ಸಾಲಗಾರರ ಕಿರುಕುಳ ತಾಳಲಾರದೆ ಹೊನ್ನಮ್ಮಕಳೆದ ಮೂರು ದಿನಗಳಿಂದ ಊಟ, ತಿಂಡಿ ಬಿಟ್ಟಿದ್ದಳು. ಆದರೆ, ನಿನ್ನೆ ತಡರಾತ್ರಿ ತೀವ್ರ ಅಸ್ವಸ್ಥತೆ ಯಿಂದ ಸಾವನ್ನಪ್ಪಿದ್ದಾಳೆ.
ತಾಯಿ ಶವ ಮುಂದಿಟ್ಟುಕೊಂಡು ಅಣ್ಣನ ಗೋಳಾಟ: ಇನ್ನು ತಾಯಿ ತಡರಾತ್ರಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಂಗಿಗಾಗಿ ಅಸಹಾಯಕ ಅಣ್ಣ ಅಳಲು ತೋಡಿಕೊಂಡಿದ್ದು, ನೀನು ಎಲ್ಲಿದ್ದರೂ ಮನೆಗೆ ವಾಪಸ್ ಬರುವಂತೆ ಕೋರಿಕೊಳ್ಳುತ್ತಿದ್ದಾನೆ. ಮನೆಯಲ್ಲಿಯೇ ಮೃತ ತಾಯಿಯ ಶವವಿಟ್ಟುಕೊಂಡು ತಂಗಿಗಾಗಿ ಕಾಯುತ್ತಿದ್ದಾನೆ. ಇನ್ನು ಗ್ರಾಮಸ್ಥರು ಕೂಡ ಸಾಲ ತೀರಿಸುವ ವಿಚಾರವನ್ನು ಮುಂದೆ ನೋಡೋಣ, ನೀನು ಎಲ್ಲಿದ್ದರೂ ಬಂದು ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಹೊನ್ನಮ್ಮನ ಪುತ್ರಿ ಹರಿಣಿಗೆ ಮನವಿ ಮಾಡಿದ್ದಾರೆ. ಇನ್ನು ಹರಿಣಿಗೆ ಆಪ್ತರಾಗಿರುವ ಎಲ್ಲರಿಗೂ ಕರೆ ಮಾಡಲಾಗುತ್ತಿದೆ.