ಹಾಸನ: ಜಿಲ್ಲೆಯಲ್ಲಿ ಬಹುತೇಕ ಬ್ಯಾಂಕುಗಳು ಒಳ್ಳೆಯ ಸೇವೆಯನ್ನು ಗ್ರಾಹಕರಿಗೆ ನೀಡುವಂತೆ ಸ್ಥಳೀಯ ಭಾಷೆಗನುಗುಣವಾಗಿ ಸೇವೆ ನೀಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ರವರು ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ 2021 22 ನೇ ಸಾಲಿನ ಜಿಲ್ಲಾ ಸಾಲ ಯೋಜನೆ ಬಿಡುಗಡೆ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ನಂತರ ಹಾಸನ ಜಿಲ್ಲಾ ಸಾಲ ಯೋಜನೆಯ ಪುಸ್ತಕ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿಗೆ ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕದೆ ಸಾಲ ನೀಡುವ ಮೂಲಕ ಪ್ರೋತ್ಸಾಹವನ್ನು ಕೊಡಬೇಕು. ಜೊತೆಗೆ ಬ್ಯಾಂಕ್ ಸಿಬ್ಬಂದಿಗಳು ಸ್ಥಳಿಯ ಜನಸಾಮಾನ್ಯರ ಭಾಷೆಗೆ ಅನುಗುಣವಾಗಿ ಸೇವೆಗಳನ್ನು ನೀಡುವ ಮೂಲಕ ಸಹಕಾರ ಕೊಡಬೇಕು ಎಂದರು. ಹಾಸನ ಜಿಲ್ಲೆಯಲ್ಲಿ ಬ್ಯಾಂಕ್ ಗಳು ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದ್ದು, ಒಂದು ಜಿಲ್ಲೆಯ ಅಭಿವೃದ್ಧಿಗೆ ಕೈಗಾರಿಕೆಯಂತೆ ಬ್ಯಾಂಕ್ ನ ಪಾತ್ರ ಅಮೂಲ್ಯವಾಗಿದೆ. ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ಇತರೆ ಭಾಗಳಿಗೆ ಬ್ಯಾಂಕ್ ಸೇವೆಗಳು ಅವಶ್ಯಕತೆಯಿರುವ ಕಡೆ ಸರ್ವೆ ಮಾಡಿ ಹೆಚ್ಚಿನ ಶಾಖೆಗಳನ್ನು ತೆರೆಯುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು. ಕೃಷಿಗೆ ಹೆಚ್ಚು ಒತ್ತು ನೀಡುವ ಸರ್ಕಾರದ ಯೋಜನೆಗಳಿಗೆ ಸಾಲ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹವನ್ನು ನೀಡುವುದರಿಂದ ಜಿಲ್ಲೆಯ ಆರ್ಥಿಕತೆಯು ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದರು. ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ ಯೋಜನೆ ಕುರಿತು ಕಾರ್ಯಾಗಾರ ನಡೆಸಿ ಮಾಹಿತಿ ನೀಡಿ ನೀಡುವುದರ ಮೂಲಕ ಅರ್ಹರಿಗೆ ಆರ್ಥಿಕತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು. ಕೆನರಾ ಬ್ಯಾಂಕ್ ವತಿಯಿಂದ ಕೌಶಲ್ಯ ತರಬೇತಿ ನೀಡುತ್ತಿರುವ ಬಗ್ಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರೊಂದಿಗೆ ಚರ್ಚಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹೆಚ್ಚಿನ ಮಾಹಿತಿಯನ್ನು ನೀಡಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಯೋಜನೆಯನ್ನು ನಿಗದಿಪಡಿಸಿರುವ ವ್ಯಾಪಾರಿಗಳಲ್ಲಿ ಅರ್ಹರನ್ನು ಆಯ್ಕೆ ಮಾಡಿ ಸೌಲಭ್ಯವನ್ನು ನೀಡುವ ಮೂಲಕ ಅವರ ಬಾಳಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ಲೀಡ್ ಬ್ಯಾಂಕಿನ ಜಿಲ್ಲಾ ವಲಯದ ಮ್ಯಾನೇಜರ್ ರೇವತಿ ಸುಧಾಕರ್ ಮಾತನಾಡಿ, ಹಾಸನ ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖೆಗಳಿಂದ ತಯಾರಿಸಿದಂತಹ ಸಾಲ ಯೋಜನೆಯನ್ನು ತಾಲೂಕು ಮಟ್ಟದಲ್ಲಿ ಕ್ರೂಢೀಕರಿಸಿ ಯೋಜನೆಗಳನ್ನು ಒತ್ತು ಕೂಡಿಸಿ ಜಿಲ್ಲಾ ವಾರ್ಷಿಕ ಯೋಜನೆಯನ್ನು ತಯಾರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸಾಲದ ಮೊತ್ತ 9394.98 ಕೋಟಿಗಳಾಗಿದ್ದು, ಆದ್ಯತಾ ವಲಯಕ್ಕೆ 8660.72 ಕೋಟಿಗಳಷ್ಟು ಬರಿಸಲಾಗಿದ್ದು ಇದು ಹಿಂದಿನ ವರ್ಷಕ್ಕಿಂತ ಶೇ. 0.35 ಕಿಂತಲೂ ಅಧಿಕವಿದ್ದು, ಜಿಲ್ಲಾ ಸಾಲ ಯೋಜನೆಯನ್ನು ನಬಾರ್ಡ್ ನ 2021- 22ರ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ ಎಂದರು.
ಆದ್ಯತಾ ಕ್ಷೇತ್ರಕ್ಕೆ ಶೇ. 92.18 ರಷ್ಟು ಹಣವನ್ನು ಮೀಸಲಿಡಲಾಗಿದ್ದು, ಕೃಷಿ ರಂಗಕ್ಕೆ 5835.72 ಕೋಟಿ ಇದು ಶೇ.67.38 ರಷ್ಟಿದೆ, ಕೈಗಾರಿಕೆಗೆ 1679.75 ಕೋಟಿಗಳಷ್ಟು ಮೀಸಲಾಗಿಟ್ಟಿದ್ದು, ಶೇಕಡ 19.39 ರಷ್ಠಿದೆ. ಇನ್ನು ವ್ಯಾಪಾರ ಹಾಗೂ ಇತರ ಸೇವೆಗಳಿಗೆ 1145.25 ಕೋಟಿಗಳಷ್ಟು ಮೀಸಲಾಗಿಡಲಾಗಿದ್ದು, ಶೇಕಡ 13.22 ರಷ್ಠಿದೆ ಎಂದು ಬ್ಯಾಂಕ್ ಸಾಲದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯಕರ‍್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಬ್ಯಾಂಕಿನ ವಿ.ಜಿ. ಭಟ್,ಸೀನಿಯರ್ ಮ್ಯಾನೇಜರ್ ಹನುಮಂತಪ್ಪ, ಟಿ. ಜಗದೀಶ್ ಇತರರು ಪಾಲ್ಗೊಂಡಿದ್ದರು.