ನಾಳೆಯಿಂದ BMTC, KSRTC ಸಿಬ್ಬಂದಿ ಮುಷ್ಕರ – ಇಂದು ರಾತ್ರಿಯಿಂದಲೇ ಬಸ್ ಸಿಗೋದು ಡೌಟ್

ಖಾಸಗಿ ವಾಹನ ಬಳಸಿ ಸರ್ಕಾರ ಪ್ರತ್ಯಾಸ್ತ್ರ

ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಮತ್ತೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಓಡಾಟ ಅನಿರ್ದಿಷ್ಟಾವಧಿಗೆ ಸ್ತಬ್ಧವಾಗಿರಲಿದೆ. ಇಂದು ರಾತ್ರಿಯಿಂದಲೇ ಮುಷ್ಕರ ಆರಂಭ ಆಗುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ತಬ್ಧ ಆಗುವ ಸಾಧ್ಯತೆಯೇ ಹೆಚ್ಚು.


ಡಿಸೆಂಬರ್‍ನಲ್ಲಿ ಮುಷ್ಕರ ಕೈಗೊಂಡಿದ್ದ ವೇಳೆ ನೀಡಿದ್ದ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ತಿರುಗಿಬಿದ್ದಿದ್ದು, ನಾಳೆಯಿಂದ ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಬಸ್ ಸಿಗದೇ ಜನಸಾಮಾನ್ಯರು ಪರದಾಡಬೇಕಾಗುವುದು ನಿಶ್ಚಿತ. ಕೆಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಇನ್ನೂ ಜಾರಿ ಆಗಿಲ್ಲ. ಆರನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಿಸಿ ಎನ್ನುವುದು ಸಾರಿಗೆ ಸಿಬ್ಬಂದಿ ಬೇಡಿಕೆ.

ವೇತನ ಪರಿಷ್ಕರಣೆಗೆ ಉಪ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಮೂರೂವರೆ ತಿಂಗಳಿಂದ ಸರ್ಕಾರ ಏನ್ಮಾಡ್ತಿತ್ತು ಎನ್ನುವುದು ಸಾರಿಗೆ ಸಿಬ್ಬಂದಿ ಪ್ರಶ್ನೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ರೂಟ್‍ನಲ್ಲಿ ಖಾಸಗಿ ಬಸ್‍ಗಳ ಓಡಾಟಕ್ಕೆ ಈಗಾಗಲೇ ಸರ್ಕಾರ ಅನುಮತಿ ನೀಡಿದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ರೂಟ್‍ಗಳಲ್ಲಿ ಖಾಸಗಿ ಬಸ್, ಮಿನಿಬಸ್, ಟ್ಯಾಕ್ಸಿ, ಕ್ಯಾಬ್‍ಗಳನ್ನು ಓಡಿಸಲು ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಖಾಸಗಿ ವಾಹನಗಳ ಮಾಲೀಕರ ಸಂಘಟನೆಯೊಂದಿಗೆ ಈಗಾಗಲೇ ಸಾರಿಗೆ ಆಯುಕ್ತರು ಸಭೆ ನಡೆಸಿದ್ದಾರೆ. ಈ ವೇಳೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಅನುಪಯುಕ್ತ ವಾಹನಗಳಿಗೆ 2 ತಿಂಗಳ ಅನುಮತಿ ನೀಡಬೇಕು, ವಾಹನ ವಿಮೆ ನೀಡಬೇಕು ಮತ್ತು ಎಲ್ಲಾ ವಾಹನಗಳಿಗೆ ತೆರಿಗೆ ವಿನಾಯಿತಿಗೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿದೆ ಎಂದು ಕರ್ನಾಟಕ ಖಾಸಗಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ನಾಳೆಯಿಂದ ಸರ್ಕಾರಿ ರೂಟ್‍ನಲ್ಲಿ 1,10,000 ಮ್ಯಾಕ್ಸಿ ಕ್ಯಾಬ್‍ಗಳು, 2,25,000 ಕಾರುಗಳು, 35 ಸಾವಿರ ಶಾಲಾ ವಾಹನಗಳು ಸಂಚರಿಸಲಿವೆ. ನಮ್ಮ ಬೇಡಿಕೆ ಈಡೇರಿಸುವ ಸರ್ಕಾರಕ್ಕೆ ಸಹಕರಿಸ್ತೇವೆ ಎಂದು ಖಾಸಗಿ ವಾಹನಗಳ ಮಾಲೀಕರು ಹೇಳಿದ್ದಾರೆ.

Post a Comment

Previous Post Next Post